ಸಮಗ್ರ ನ್ಯೂಸ್ : ಜೋಕಟ್ಟೆಯ ಬಾಡಿಗೆ ಮನೆಗೆ ಅತಿಥಿಯಾಗಿ ಬಂದಿದ್ದ ಬೆಳಗಾವಿ ಮೂಲದ 14 ವರ್ಷದ ಬಾಲಕಿಯ ಕೊಲೆ ಪ್ರಕರಣದ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಕಳೆದ 6 ತಿಂಗಳಿನಿಂದ ಜೋಕಟ್ಟೆಯಲ್ಲಿ ವಾಸಿಸುತ್ತಿದ್ದ ಬೆಳಗಾವಿ ಜಿಲ್ಲೆ ಪರಸಘಡ ನಿವಾಸಿ ಫಕ್ಕೀರಪ್ಪ ಹಣಮಪ್ಪ ಮಾದರ (51) ಕೊಲೆ ಆರೋಪಿ.
ಆರೋಪಿಯು ಜೋಕಟ್ಟೆಯಲ್ಲಿ ವಿಜಯ ವಿಠಲ ಭಜನಾ ಮಂದಿರದ ಹಿಂಭಾಗದಲ್ಲಿ ಕೇಶವ ಎಂಬವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಆರೋಪಿಯು ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ.
ಕೃತ್ಯ ನಡೆದ 24 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಹಾಗೂ ಕೊಲೆಯಾದ ಬಾಲಕಿ ಒಂದೇ ಜಿಲ್ಲೆಗೆ ಸೇರಿದವರು. ಆ 6 ರಂದು ಬೆಳಿಗ್ಗೆ ಮನೆಯವರೆಲ್ಲ ಕೆಲಸಕ್ಕೆ ಹೋದ ಬಳಿಕ , ತನ್ನ ಚಿಕ್ಕಪ್ಪ ವಾಸವಿದ್ದ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿದ್ದ, ಬಾಲಕಿಯ ಕುತ್ತಿಗೆ ಹಿಸುಕಿ ಕೊಲೆಗೆಯ್ಯಲಾಗಿತ್ತು. ಬಾಲಕಿಯ ತಾಯಿ ಪಕ್ಕದ ಮನೆಯವರಿಗೆ ಕರೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಕೃತ್ಯದ ಬಗ್ಗೆ ಬಾಲಕಿಯ ಚಿಕ್ಕಪ್ಪ ಹನುಮಪ್ಪ ಎಂಬವರು ದೂರು ನೀಡಿದ್ದರು . ಕೈ ನೋವಿನ ಚಿಕಿತ್ಸೆಗೆಂದು ಬಾಲಕಿಯು ನಾಲ್ಕು ದಿನಗಳ ಹಿಂದೆ ಬೆಳಗಾವಿಯಿಂದ ಚಿಕ್ಕಪ್ಪನ ಮನೆಗೆ ಬಂದಿದ್ದಳು. ಹನುಮಪ್ಪ ಹಾಗೂ ಆರೋಪಿ ಫಕ್ಕೀರಪ್ಪ ಹಣಮಪ್ಪ ಸ್ನೇಹಿತರಾಗಿದ್ದು, ಆಗಾಗ ಅವರ ಮನೆಗೆ ಬಂದು ಹೋಗುತ್ತಿದ್ದ. ಅಲ್ಲಿ ಆತ ಬಾಲಕಿಯನ್ನು ನೋಡಿದ್ದ.
ಮನೆಯವರು ಕೆಲಸಕ್ಕೆ ಬಳಿಕ ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿರುತ್ತಾಳೆ ಎಂಬ ಬಗ್ಗೆ ಮಾಹಿತಿಯಿದ್ದ ಆರೋಪಿಯು, ಆಕೆಯಿದ್ದ ಬಾಡಿಗೆ ಮನೆಗೆ ಬಂದು ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದ. ಬಾಲಕಿ ಅದಕ್ಕೆ ಪ್ರತಿರೋಧ ಒಡ್ಡಿದ್ದಾಗ, ಈ ವಿಚಾರ ಬಹಿರಂಗವಾಗಬಹುದು ಎಂಬ ಭಯದಿಂದ ಆರೋಪಿಯು ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ
ಪ್ರಕರಣದ ತನಿಖೆಯು ಮುಂದುವರೆದಿರುತ್ತದೆ. ಆರೋಪಿಯು ಕಳೆದ 06 ತಿಂಗಳಿನಿಂದ ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ.
ಪೊಲೀಸ್ ಆಯುಕ್ತ ಶ್ರೀ ಅನುಪಮ್ ಅಗರವಾಲ್ ಐ.ಪಿ.ಎಸ್. ಸಿದ್ದಾರ್ಥ ಗೋಯಲ್, ಐ.ಪಿ.ಎಸ್. ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ), ಬಿ.ಪಿ ದಿನೇಶ್ ಕುಮಾರ್ ಡಿ.ಸಿ.ಪಿ. (ಅಪರಾಧ ಮತ್ತು ಸಂಚಾರ ವಿಭಾಗ), ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ರವೀಶ್ ನಾಯಕ್ (ಪ್ರಭಾರ) ಮತ್ತು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮನೋಜ್ ಕುಮಾರ್ ನಾಯ್ ರವರ ಮಾರ್ಗದರ್ಶನದಲ್ಲಿ, ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್, ಪಣಂಬೂರು ಪೊಲೀಸ್ ಠಾಣಾ ಕಾನೂನು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕಿ ಶ್ರೀ ಶ್ರೀಕಲಾ ಕೆ.ಟಿ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ. ಕೃಷ್ಣ, ಬಿ.ಕೆ. ಹೆಚ್.ಸಿ.ಗಳಾದ ಸತೀಶ್ ಎಮ್ ಆರ್, ಸಯ್ಯದ್ ಇಂತಿಯಾಜ್ ,ಸಿಪಿಸಿ ಗಳಾದ ಶಶಿಕುಮಾರ್, ರಾಕೇಶ್, ರವರುಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ