ಸಮಗ್ರ ನ್ಯೂಸ್: ಮಂಗಳೂರು- ಬೆಂಗಳೂರು ರೈಲು ಮಾರ್ಗದ ಎಡಕುಮೇರಿ- ಕಡಗರವಳ್ಳಿ ನಡುವಿನ ದೋಣಿಹಗಲ್‌ನ ರೈಲು ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದ ದುರಸ್ತಿ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಸ್ಥಳದಲ್ಲಿ ರೈಲು ಎಂಜಿನ್ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.
ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ ಕ್ಷಣದಿಂದ ದುರಸ್ತಿ ಕಾರ್ಯಗಳನ್ನು ಆರಂಭಿಸಲಾಗಿದ್ದು, ಶನಿವಾರ ಭೂಕುಸಿತದ ಸ್ಥಳದಲ್ಲಿ ತಡೆಗೋಡೆ ಗೋಡೆ ಕಾಮಗಾರಿ ಪೂರ್ಣಗೊಂಡಿತ್ತು. ಹಳಿ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾಮಗಾರಿಗಳು ಭರದಿಂದ ನಡೆಯುತ್ತಿದೆ.
ಕೆಳಭಾಗದಿಂದಲೇ ಬಂಡೆಗಳನ್ನು ಜೋಡಿಸಿ, ಕಬ್ಬಿಣದ ನೆಟ್ ಬಳಸಿ ಗೋಡೆ ನಿರ್ಮಿಸಲಾಗಿದೆ. ಇದರ ಮೇಲೆ ಇನ್ನೊಂದು ಹಂತದಲ್ಲಿ ಬಂಡೆ ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ. ಕಾಮಗಾರಿ ಬಹುತೇಕ ಅಂತಿಮಗೊಂಡ ಹಿನ್ನೆಲೆಯಲ್ಲಿ ಒಂದು ರೈಲು ಎಂಜಿನ್ ಅನ್ನು ಪ್ರಾಯೋಗಿಕವಾಗಿ ನಿಧಾನವಾಗಿ ಸಂಚರಿಸಲಾಗಿದ್ದು, ಅದು ಯಶಸ್ವಿಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.