ಸಮಗ್ರ ನ್ಯೂಸ್: ಸಾಮಾನ್ಯವಾಗಿ ಈ ರಜೆಯ ಆದೇಶವನ್ನು ಜಿಲ್ಲಾಧಿಕಾರಿಗಳ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಹೊರಡಿಸಲಾಗುತ್ತದೆ. ಉದಾಹರಣೆಗೆ ಜಿಲ್ಲಾದ್ಯಂತ ಭಾರೀ ಮಳೆಯ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ (ನಿಗದಿತ ದಿನಾಂಕ ನಮೂದಿಸಿ) ಈ ದಿನ ರಜೆ ಇರುತ್ತದೆ ಎಂದು ಆದೇಶ ಪ್ರತಿ ಹೊರಡಿಸಲಾಗುತ್ತದೆ. ಈ ಆದೇಶದಲ್ಲಿ ಪದವಿ ವಿದ್ಯಾರ್ಥಿಗಳಿಗೆ ರಜೆ ನೀಡಿರುವುದಿಲ್ಲ ಎನ್ನುವುದು ಸದ್ಯದ ಆರೋಪವಾಗಿದೆ ಜೊತೆಗೆ ವಿದ್ಯಾರ್ಥಿಗಳ ಪ್ರಶ್ನೆ ಆಗಿದೆ.
ಎಷ್ಟೇ ಮಳೆ ಬಂದರೂ ಡಿಗ್ರಿ ವಿದ್ಯಾರ್ಥಿಗಳಿಗೆ ಯಾಕೆ ರಜೆ ಇಲ್ಲ..? ನಾವೇನು ಸೂಪರ್ ಮ್ಯಾನ್‌ಗಳಾ..? ಎಷ್ಟೇ ಗಾಳಿ-ಮಳೆ ಇದ್ದರೂ ಕಾಲೇಜಿಗೆ ಬರಲು ಎನ್ನುವುದು ಪದವಿ ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉತ್ತರ ನೀಡಿದ್ದಾರೆ.
ಪದವಿ ವಿದ್ಯಾರ್ಥಿಗಳಿಗೆ ರಜೆ ಯಾಕಿಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಡಿಗ್ರಿ ವಿದ್ಯಾರ್ಥಿಗಳು ಹದಿನೆಂಟು ವಯಸ್ಸಿನಲ್ಲಿ ದೇಶ ಕಾಯಲು ಯೋಧರಾಗಿ ಹೋಗುವಂತಹ ಅರ್ಹತೆ ಇರುವವರು. ನಾಳೆ ಮಳೆಯಿಂದ ಏನಾದರೂ ತೊಂದರೆಯಾಗಿ ರಕ್ಷಣಾ ತಂಡ ಬೇಕು ಅಂದರೆ ನಾವು ಡಿಗ್ರಿ ಮಕ್ಕಳನ್ನೇ ಅವಲಂಬಿರಾಗಿದ್ದೇವೆ. ಅವರು ನಮ್ಮ ಜೊತೆ ಬೆನ್ನೆಲುಬಾಗಿ ನಿಲ್ಲಬೇಕು. ಯೋಧರಾಗಿ ನಿಲ್ಲ ಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ. ಇದರಿಂದ ದಕ್ಷಿಣ ಕನ್ನಡ ಪದವಿ ವಿದ್ಯಾರ್ಥಿಗಳಿಗೆ ಮಳೆ ಬಂದರೆ ಯಾಕೆ ರಜೆ ಇಲ್ಲ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.