ಸಮಗ್ರ ನ್ಯೂಸ್: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 308ಕ್ಕೆ ಏರಿಕೆಯಾಗಿದೆ. ಇನ್ನೂ ನೂರಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಭಾರತೀಯ ಸೇನೆ, ಎನ್‌ಡಿಆರ್‌ಎಫ್ ಸೇರಿದಂತೆ 40ಕ್ಕೂ ಹೆಚ್ಚು ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
ಮನೆಗಳು ಮತ್ತು ಇತರ ಕಟ್ಟಡಗಳ ಮೇಲೆ ಬಿದ್ದ ಮಣ್ಣು ಮತ್ತು ಬೃಹತ್ ಮರಗಳನ್ನು ತೆರವುಗೊಳಿಸಲಾಗ್ತಿದೆ. ಅಟ್ಟಮಲ ಮತ್ತು ಆರಣಮಲ, ಮುಂಡಕ್ಕೈ, ಪುಂಚಿರಿಮಟ್ಟಂ, ವೆಳ್ಳರಿಮಲ ಗ್ರಾಮ, ಜಿವಿಎಚ್‌ಎಸ್‌ಎಸ್ ವೆಳ್ಳರಿಮಲ, ಮತ್ತು ನದಿ ದಂಡೆಯಲ್ಲಿ ತಂಡಗಳು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಿವೆ.
ಈ ನಡುವೆ ಭಾರತೀಯ ಹವಾಮಾನ ಇಲಾಖೆಯು ವಯನಾಡ್ ಮತ್ತು ಕೇರಳದ ಇತರ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 5ರ ವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ತ್ರಿಶೂರ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಶಾಲಾ ಕಾಲೇಜುಗಳು ಮತ್ತು ಟ್ಯೂಷನ್ ಸೆಂಟರ್‌ಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಜಿಲ್ಲೆಗಳಿಗೆ ಶುಕ್ರವಾರ ರಜೆ ನೀಡಲಾಗಿದೆ.
ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲು ಭಾರತೀಯ ಸೇನೆಯು 190 ಅಡಿ ಉದ್ದದ ಸೇತುವೆಯನ್ನು ನಿರ್ಮಿಸಿದೆ. ಈ ಸೇತುವೆಯು ಇರುವಂಜಿಪ್ಪುಳ ನದಿಯ ಮೇಲೆ ಮುಂಡಕ್ಕೈ ಮತ್ತು ಚೂರಲ್ಮಲದ ನೆರೆ ಪೀಡಿತ ಪ್ರದೇಶಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಎರಡು ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿತ್ತು.