ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಮತ್ತು ಜನತೆ ಈಗಲೇ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಮಲೆನಾಡು ಮತ್ತು ಕರಾವಳಿ ಭಾಗದ 29 ತಾಲೂಕಿನ ಹಲವು ಕಡೆಗಳಲ್ಲಿ ಕೇರಳದ ವಯನಾಡಿನ ರೀತಿಯಲ್ಲೇ ಭೂಕುಸಿತ ಸಂಭವಿಸುವ ಅಪಾಯವಿದೆ!
ಮಳೆಗಾಲದ ಸಂದರ್ಭದಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಉಂಟಾಗುವ ಭೂಕುಸಿತಕ್ಕೆ ಕಾರಣ ಹಾಗೂ ಅದನ್ನು ತಡೆಯುವ ಸಲುವಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು 2022ರಲ್ಲಿ ಭೂಕುಸಿತ ನಿರ್ವಹಣೆಗಾಗಿ ಕ್ರಿಯಾಯೋಜನೆ ರೂಪಿಸಿತ್ತು.
ಆ ಕ್ರಿಯಾಯೋಜನೆಗೆ ತಕ್ಕಂತೆ ಸರ್ಕಾರ ಈವರೆಗೆ ಸಮರ್ಪಕ ಕ್ರಮ ಕೈಗೊಂಡಿಲ್ಲ. ಹೀಗಾಗಿ 2022ರಲ್ಲಿ ಭಾರೀ ಮಳೆಯಿಂದಾಗಿ ರಾಜ್ಯದ 55 ಕಡೆಗಳಲ್ಲಿ ಭೂಕುಸಿತ ಉಂಟಾಗಿತ್ತು. ಅಲ್ಲದೆ, 2023ರಲ್ಲಿ ಮಳೆ ಪ್ರಮಾಣ ಕುಸಿದ ಕಾರಣ ಕೇವಲ 2 ಕಡೆ ಮಾತ್ರ ಭೂಕುಸಿತವಾಗಿತ್ತು. ಆದರೆ, ಈ ಬಾರಿ ಮಳೆಯ ಪ್ರಮಾಣ ತೀವ್ರವಾಗಿರುವ ಕಾರಣದಿಂದಾಗಿ 16ಕ್ಕೂ ಹೆಚ್ಚಿನ ಕಡೆಗಳಲ್ಲಿ ಗುಡ್ಡ ಮತ್ತು ಭೂಕುಸಿತ ಉಂಟಾಗಿದೆ. ಅಲ್ಲದೆ, ಭೂಕುಸಿತ ನಿರ್ವಹಣೆಗಾಗಿ ರೂಪಿಸಲಾಗಿದ್ದ ರಾಜ್ಯ ಕ್ರಿಯಾಯೋಜನೆಯಲ್ಲಿರುವಂತೆ ಭೂಕುಸಿತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ 29 ತಾಲೂಕಿನ ಹಲವೆಡೆ ಭೂಕುಸಿತ ಪ್ರಮಾಣ ಹೆಚ್ಚುವ ಆತಂಕವಿದೆ.
ಭೂಕುಸಿತದ ಭೀತಿ ಇರುವ ಜಿಲ್ಲೆ, ತಾಲೂಕುಗಳು:
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಹೊನ್ನಾವರ, ಕಾರವಾರ, ಕುಮಟಾ, ಸಿದ್ದಾಪುರ, ಶಿರಸಿ, ಸೂಪಾ, ಯಲ್ಲಾಪುರ,
ಉಡುಪಿ ಜಿಲ್ಲೆಯ ಹೆಬ್ರಿ, ಕಾರ್ಕಳ, ಬೈಂದೂರು, ಕುಂದಾಪುರ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಹೊಸನಗರ
ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಕಡಬ, ಸುಳ್ಯ, ಪುತ್ತೂರು
ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಎನ್‌ಆರ್ ಪುರ, ಶೃಂಗೇರಿ ಹಾಗೂ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕುಗಳು ಭೂಕುಸಿತದ ಭೀತಿಯಲ್ಲಿವೆ.
ಭೂಕುಸಿತಕ್ಕೆ ಕಾರಣಗಳೇನು?
ಕಡಿದಾದ ಗುಡ್ಡಗಳಲ್ಲಿ ತೆಳುವಾದ ಮಣ್ಣಿನ ಹೊದಿಕೆ, ಇಳಿಜಾರು ಪ್ರದೇಶದ ಭೂ ಸ್ವರೂಪದಲ್ಲಿ ಬದಲಾವಣೆ, ಭಾರೀ ಮಳೆ, ನೈಸರ್ಗಿಕವಾಗಿ ನೀರು ಹರಿಯುವಿಕೆಗೆ ತಡೆ, ಇಳಿಜಾರು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುವುದು, ನೈಸರ್ಗಿಕ ನಾಲಾಗಳಲ್ಲಿ ತಾತ್ಕಾಲಿಕ ಆಣೆಕಟ್ಟು ನಿರ್ಮಾಣ, ಗುಡ್ಡ ಸೇರಿದಂತೆ ಇಳಿಜಾರು ಪ್ರದೇಶದಲ್ಲಿ ಅರಣ್ಯ ನಾಶ ಮಾಡುವುದರಿಂದ ಭೂಕುಸಿತವಾಗುತ್ತದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿಯಂತೆ 2009ರ ಜನವರಿಯಿಂದ 2021ರ ಡಿಸೆಂಬರ್‌ವರೆಗೆ ರಾಜ್ಯದಲ್ಲಿ 1,272 ಕಡೆಗಳಲ್ಲಿ ಭೂಕುಸಿತ ಉಂಟಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗುವಂತಾಗಿದೆ. ಅದರಲ್ಲೂ ಉತ್ತರಕನ್ನಡ, ಶಿವಮೊಗ್ಗ ಭಾಗದಲ್ಲಿ 2016ರಿಂದೀಚೆಗೆ ಭೂಕುಸಿತ ಪ್ರಮಾಣ ಹೆಚ್ಚಾಗಿದೆ. 2009ರಲ್ಲಿ ಕೇವಲ 27 ಕಡೆಗಳಲ್ಲಿ ಮಾತ್ರ ಭೂಕುಸಿತ ಉಂಟಾಗಿತ್ತು. ಆದರೆ, 2016ರಲ್ಲಿ 125, 2017ರಲ್ಲಿ 219, 2018ರಲ್ಲಿ 462, 2019ರಲ್ಲಿ 161, 2020ರಲ್ಲಿ 264 ಹೀಗೆ ವರ್ಷದಿಂದ ವರ್ಷಕ್ಕೆ ಭೂಕುಸಿತದ ಪ್ರಮಾಣ ಹೆಚ್ಚಾಗುವಂತಾಗಿದೆ. 2018ರಲ್ಲಿಯೇ ಅತಿಹೆಚ್ಚು ಭೂಕುಸಿತ ಸಂಭವಿಸಿದೆ. ಹಾಗೆಯೇ, ಪಶ್ಚಿಮ ಘಟ್ಟ ಮತ್ತು ಕೊಂಕಣ ಪ್ರದೇಶ ವ್ಯಾಪ್ತಿಯಲ್ಲಿ ಹಲವು ಪ್ರದೇಶಗಳಲ್ಲಿ ಈಗಲೂ ಭೂಕುಸಿತದ ಆತಂಕವಿದೆ. 13 ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 439 ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ.
ಭೂಕುಸಿತ ನಿರ್ವಹಣೆಗಾಗಿ ರಾಜ್ಯ ಕ್ರಿಯಾಯೋಜನೆಯಲ್ಲಿ 2022ರಲ್ಲಿ ಭೂಕುಸಿತಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಶಾಶ್ವತ ಪರಿಹಾರವನ್ನೂ ಸೂಚಿಸಲಾಗಿತ್ತು. ಅದರಂತೆ ಹೆಚ್ಚು ಮಳೆ ಬೀಳುವ, ಗುಡ್ಡ ಕುಸಿಯುವ ಸಂಭವನೀಯತೆ ಇರುವ ಸ್ಥಳಗಳನ್ನು ಗುರುತಿಸಬೇಕು. ಅಲ್ಲಿ ತಡೆಗೋಡೆ ನಿರ್ಮಾಣ, ಅಲ್ಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು, ಭೂಕುಸಿತದಂತಹ ಸಂದರ್ಭದಲ್ಲಿ ವಿವಿಧ ಇಲಾಖೆಗಳೊಂದಿಗೆ ತಕ್ಷಣದಲ್ಲಿ ಸಮನ್ವಯ ಸಾಧಿಸಲು ಸೂಕ್ತ ವ್ಯವಸ್ಥೆ ಮಾಡುವುದು, ಪ್ರತಿವರ್ಷ ಕ್ರಿಯಾಯೋಜನೆಯನ್ನು ಉನ್ನತೀಕರಿಸುವುದು, ಭೂಕುಸಿತ ಭೀತಿ ಇರುವಲ್ಲಿ ಭೂ ವೈಜ್ಞಾನಿಕ ಅಧ್ಯಯನ ನಡೆಸುವುದು ಹೀಗೆ ಇನ್ನಿತರ ಅಂಶಗಳನ್ನು ಉಲ್ಲೇಖಿಸಲಾಗಿತ್ತು. ಆದರೆ, ಆ ಅಂಶಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಭೂಕುಸಿತ ಘಟನೆಗಳು ನಿರಂತರವಾಗುವಂತಾಗಿದೆ.