ಸಮಗ್ರ ನ್ಯೂಸ್: ದೇಶದಲ್ಲಿ ಮತ್ತೊಂದು ಮರ್ಯಾದೆ ಹತ್ಯೆ ನಡೆದಿದೆ. ಮಹಾರಾಷ್ಟ್ರದ ಛತ್ರಪತಿ ಶಂಭಾಜಿ ನಗರದಲ್ಲಿ ವಾಸವಾಗಿರುವ ವಿದ್ಯಾ, ಪತಿ ಅಮಿತ್ ಸಾಳುಂಕೆ ನಿಧನದಿಂದ ಕಣ್ಣೀರು ಹಾಕುತ್ತಿದ್ದಾಳೆ. ವಿದ್ಯಾ ಕೀರ್ತಿ ಶಾಹಿ ಮತ್ತು ಅಮಿತ್ ಸಾಳುಂಕೆ ಕೆಲವು ಸಮಯದಿಂದ ಲವ್ ಮಾಡುತ್ತಿದ್ದರು. ಆದರೆ, ಅಮಿತ್ನನ್ನು ಮದುವೆಯಾಗುವುದಕ್ಕೆ ವಿದ್ಯಾಳ ಪಾಲಕರು ಮತ್ತು ಸಂಬಂಧಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ವಿರೋಧವನ್ನು ಲೆಕ್ಕಿಸದೆ 2024ರ ಮೇ 2ರಂದು ಪುಣೆಗೆ ಹೋಗಿ ದೇವಸ್ಥಾನವೊಂದರಲ್ಲಿ ಇಬ್ಬರು ಮದುವೆಯಾದರು.
ಈ ಬಗ್ಗೆ ಮಾತನಾಡಿರುವ ವಿದ್ಯಾ, ಮದುವೆಯಾದ ಬಳಿಕ ಒಂದು ತಿಂಗಳು ಪುಣೆಯಲ್ಲಿದ್ದೆವು. ಈ ವೇಳೆ ನಮಗೆ ಹಲವು ಬೆದರಿಕೆ ಕರೆಗಳು ಬಂದಿದ್ದವು. ಹಳ್ಳಿಯಲ್ಲದ ಹಳ್ಳಿಯಲ್ಲಿ ನಮಗೇನಾದರೂ ಸಂಭವಿಸಿದರೆ ದಿಕ್ಕು ತೋಚದಂತಾಗುತ್ತದೆ ಎಂಬ ಭಯದಲ್ಲಿ ಶಂಭಾಜಿನಗರಕ್ಕೆ ಮರಳಿದೆವು. ಅಮಿತ್ ಸಾಳುಂಕೆ ಅವರ ಕುಟುಂಬಸ್ಥರು ನಮ್ಮ ಮದುವೆಗೆ ಒಪ್ಪಿಗೆ ಸೂಚಿಸಿದರು. ಬಳಿಕ ನಾವಿಬ್ಬರು ಮತ್ತೆ ಮದುವೆಯಾದೆವು ಎಂದಿದ್ದಾರೆ.
ಈ ತಿಂಗಳ ಜುಲೈ 14ರಂದು ಅಮಿತ್ ಮನೆಯಲ್ಲಿದ್ದಾಗ ಕೆಲವು ಹುಡುಗರು ವಿಡಿಯೋ ಗೇಮ್ ಆಡುವ ನೆಪದಲ್ಲಿ ಅಮಿತ್ಗೆ ಕರೆ ಮಾಡಿದ್ದಾರೆ. ಅಮಿತ್ ಕೂಡ ಹೋದ. ನನ್ನ ತಂದೆ ಗೀತಾರಾಮ್ ಕೀರ್ತಿ ಶಾಹಿ, ಹಿಂದಿನಿಂದ ಬಂದು ನನ್ನ ಗಂಡನಿಗೆ 8 ಬಾರಿ ಇರಿದು ಕೊಲೆ ಮಾಡಿದ್ದಾರೆ. ನನ್ನ ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ನಾವು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು. 12 ದಿನಗಳ ಕಾಲ ಸಾವಿನೊಂದಿಗೆ ಹೋರಾಡಿದ. ಆದರೆ, ಚಿಕಿತ್ಸೆ ಫಲಿಸದೇ ಜುಲೈ 25 ರಂದು ನಿಧನರಾದರು. ಸಾಯುವ ಮುನ್ನ ನನ್ನ ಪತಿ ನನ್ನ ಕೈ ಹಿಡಿದು ತುಂಬಾ ಅಳುತ್ತಿದ್ದ. ಜುಲೈ 26 ರಂದು ಅಂತ್ಯಕ್ರಿಯೆ ನಡೆಸಲಾಯಿತು. ನನ್ನ ಗಂಡನನ್ನು ಕೊಂದವರ ವಿರುದ್ಧ ನಾನು ಪೊಲೀಸ್ ದೂರು ನೀಡಿದ್ದೇನೆ. ಛತ್ರಪತಿ ಶಂಭಾಜಿನಗರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ವಿದ್ಯಾ ಹೇಳಿದರು.
ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಗಳ ಪತ್ತೆಗೆ ಎರಡು ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತನಿಖಾಧಿಕಾರಿ ಮಾಹಿತಿ ನೀಡಿದ್ದಾರೆ.