ಸಮಗ್ರ ನ್ಯೂಸ್: ಭಯಾನಕ ಭೂಕುಸಿತಕ್ಕೆ ಕೇರಳ ಅಕ್ಷರಶಃ ತತ್ತರಿಸಿ ಹೋಗಿದೆ. ಮಂಗಳವಾರ ಮುಂಜಾನೆ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲಾ ಮತ್ತು ನೂಲ್ಪುಝಾ ಗ್ರಾಮದಲ್ಲಿ ಭೂಕುಸಿತ ಆಗಿದೆ. ಒಟ್ಟು ಮೂರು ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಭಾರೀ ಸಾವು ನೋವು ಸಂಭವಿಸಿದೆ. ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶವು ಅಕ್ಷರಶಃ ಗುರುತೇ ಸಿಗದಂತಾಗಿದೆ. ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಹೆಣಗಳು ತೇಲಿ ಬರುತ್ತಿವೆ.
ದೇವರ ನಾಡು ರಕ್ಕಸ ಮಳೆಯಾರ್ಭಟಕ್ಕೆ ಸ್ಮಶಾನವಾಗಿದೆ. ಭೂಕುಸಿತದ ಪರಿಣಾಮ ಮರಗಳು, ಮಣ್ಣು, ಮನೆಗಳನ್ನು ತೊಯ್ದುಬಿಟ್ಟಿವೆ. ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಅಗ್ನಿಶಾಮಕ ದಳ, ಎನ್ಡಿಆರ್ಎಫ್ ಮತ್ತು ಸ್ಥಳೀಯ ತಂಡಗಳು ಸೇರಿ ಸುಮಾರು 250 ಜನರು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಭೀಕರ ಭೂಕುಸಿತದಲ್ಲಿ ಸಾವನ್ನಪ್ಪಿದವರ ಮೃತದೇಹಗಳು ನದಿಯಲ್ಲಿ ತೇಲಿ ಹೋಗುತ್ತಿವೆ. 200ಹೆಚ್ಚು ಮನೆಗಳು ಭೂ ಕುಸಿತಕ್ಕೆ ಹಾನಿಯಾಗಿವೆ.
ಇತ್ತೀಚಿನ ವರದಿಗಳ ಪ್ರಕಾರ ಭೀಕರ ಭೂಕುಸಿತ ಸಂಭವಿಸಿದ್ದು, ಮೃತರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ. ನೂರಾರು ಮಂದಿ ಅವಶೇಷದಡಿಯಲ್ಲಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಮೆಪ್ಪಡಿ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಭೀತಿ ಎದುರಾಗಿದೆ. ಇದೀಗ ಎಲ್ಲಿ ನೋಡಿದರೂ ಮಣ್ಣಿನ ರಾಶಿಯೇ ಕಂಡು ಬಂದಿದ್ದು, ರಸ್ತೆ, ಸೇತುವೆ, ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಸಿಬ್ಬಂದಿ, ಸರ್ಕಾರಿ ಸಂಸ್ಥೆ ಸಿಬ್ಬಂದಿ ಸೇರಿದಂತೆ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡಲು 43 ಭಾರತೀಯ ಸೇನಾ ಸಿಬ್ಬಂದಿಯ ತಂಡವನ್ನು ಸಹ ಸಜ್ಜುಗೊಳಿಸಲಾಗಿದೆ. ಇದೇ ವೇಳೆ ಸೇತುವೆ ಕುಸಿದಿರುವುದು ರಕ್ಷಣಾ
ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ. ಸರ್ಕಾರಿ ಮೂಲಗಳ ಪ್ರಕಾರ, ಈವರೆಗೆ ಗುಡ್ಡಗಾಡು ಪ್ರದೇಶಗಳಿಂದ 250 ಜನರನ್ನು ರಕ್ಷಿಸಲಾಗಿದೆ.