Ad Widget .

ಪ್ರತಿ ಶೈಕ್ಷಣಿಕ ವರ್ಷದಲ್ಲಿ 10 ದಿನಗಳವರೆಗೆ ಬ್ಯಾಗ್‌ರಹಿತ ದಿನ/ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಾರ್ಗಸೂಚಿ ಬಿಡುಗಡೆ

ಸಮಗ್ರ ನ್ಯೂಸ್‌: ಪ್ರತಿ ಶೈಕ್ಷಣಿಕ ವರ್ಷದಲ್ಲಿ 6 ರಿಂದ 8ನೇ ತರಗತಿ ವರೆಗಿನ ಮಕ್ಕಳಿಗೆ 10 ದಿನಗಳವರೆಗೆ ಬ್ಯಾಗ್‌ರಹಿತ ದಿನಗಳನ್ನು ಜಾರಿಗೊಳಿಸುವ ಸಂಬಂಧ ಕೇಂದ್ರ ಶಿಕ್ಷಣ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ (ಎನ್‌ಸಿಇಆರ್‌ಟಿ) ಅಂಗಸಂಸ್ಥೆಯಾದ ಪಂಡಿತ್ ಸುಂದರ್ಲಾಲ್ ಶರ್ಮಾ (ಪಿಎಸ್‌ಎಸ್) ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಫಾರ್ ವೊಕೇಷನಲ್ ಎಜುಕೇಷನ್‌ ಈ ಕುರಿತು ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (2020) ನಾಲ್ಕನೇ ವರ್ಷಾಚರಣೆ ಸಂದರ್ಭದಲ್ಲಿ ಅದನ್ನು ಬಿಡುಗಡೆ ಮಾಡಲಾಗಿದೆ.

Ad Widget . Ad Widget .

ಮಕ್ಕಳಲ್ಲಿ ಉತ್ಸಾಹ, ಉಲ್ಲಾಸ ಹೆಚ್ಚಿಸುವುದು, ಒತ್ತಡ ತಗ್ಗಿಸುವುದು ಹಾಗೂ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡುವ ಉದ್ದೇಶವನ್ನು ಇದು ಹೊಂದಿದ್ದು, 6 ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ 10 ದಿನಗಳ ಬ್ಯಾಗ್‌ರಹಿತ ದಿನಗಳನ್ನು ಪರಿಚಯಿಸಬೇಕು ಎಂದು ಎನ್‌ಇಪಿ-2020 ಶಿಫಾರಸು ಮಾಡಿತ್ತು.

Ad Widget . Ad Widget .

ವಿದ್ಯಾರ್ಥಿಗಳು ಈ ಅವಧಿಯಲ್ಲಿ ಮರಗೆಲಸ, ವಿದ್ಯುತ್ ಕೆಲಸ, ಲೋಹದ ಕೆಲಸ, ತೋಟಗಾರಿಕೆ, ಕುಂಬಾರಿಕೆ ಸೇರಿದಂತೆ ವಿವಿಧ ವೃತ್ತಿಪರ ಕುಶಲತೆಯನ್ನು ಕಲಿಯುವ ಅವಕಾಶ ಪಡೆಯಲಿದ್ದಾರೆ. ರಾಜ್ಯಗಳು ಮತ್ತು ಸ್ಥಳೀಯ ಸಮುದಾಯದವರು ಸ್ಥಳೀಯ ಕೌಶಲ ಅಗತ್ಯಗಳಿಗೆ ತಕ್ಕಂತೆ ಇವುಗಳನ್ನು ನಿರ್ಧರಿಸಬಹುದು. 6ರಿಂದ 8ನೇ ತರಗತಿ ಓದುವ ಪ್ರತಿ ವಿದ್ಯಾರ್ಥಿಯೂ ಒಂದು ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ಬ್ಯಾಗ್‌ರಹಿತ 10 ದಿನಗಳ ಅವಧಿಯಲ್ಲಿ ಈ ವಿದ್ಯಾರ್ಥಿಗಳು ಬಡಗಿಗಳು, ತೋಟಗಾರಿಕೆಯಲ್ಲಿ ತೊಡಗಿರುವವರು, ಕುಂಬಾರರು ಮತ್ತು ಇತರ ಸ್ಥಳೀಯ ವೃತ್ತಿಪರ ತಜ್ಞರ ಬಳಿ ‘ಇಂಟರ್ನ್’ ಆಗಿ ಕಾರ್ಯ ನಿರ್ವಹಿಸಬೇಕು. ಶೈಕ್ಷಣಿಕ ವರ್ಷದಲ್ಲಿ ಎರಡು ಅಥವಾ ಮೂರು ಹಂತಗಳಲ್ಲಿ 10 ದಿನಗಳ ಬ್ಯಾಗ್‌ರಹಿತ ದಿನಗಳ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವುದು ಸೂಕ್ತ. ಈ ಸಂಬಂಧ ವಾರ್ಷಿಕ ಯೋಜನೆ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಎಲ್ಲ ವಿಷಯಗಳ ಶಿಕ್ಷಕರನ್ನು ತೊಡಗಿಸಿಕೊಳ್ಳಬಹುದು. ಅಗತ್ಯವಿದ್ದರೆ ಒಳಾಂಗಣ ಮತ್ತು ಹೊರಾಂಗಣ ಚಟುವಟಿಕೆಗಳನ್ನು ಇದರ ಭಾಗವಾಗಿಸಬಹುದು. ತರಕಾರಿ ಮಾರುಕಟ್ಟೆಗೆ ಭೇಟಿ, ಸಾಕು ಪ್ರಾಣಿಗಳ ಆರೈಕೆ ಕುರಿತು ಸಮೀಕ್ಷೆ ಮತ್ತು ವರದಿ, ಚಿತ್ರ ಬರಹ, ಗಾಳಿಪಟ ತಯಾರಿಸುವುದು ಮತ್ತು ಹಾರಿಸುವುದು, ಪುಸ್ತಕ ಮೇಳ ಆಯೋಜನೆ, ಆಲದ ಮರದ ಕೆಳಗೆ ಕುಳಿತುಕೊಳ್ಳುವುದು, ಜೈವಿಕ ಅನಿಲ ಘಟಕ ಮತ್ತು ಸೌರ ಶಕ್ತಿ ಪಾರ್ಕ್‌ಗೆ ಭೇಟಿ ಸೇರಿದಂತೆ ಇತರ ಚಟುವಟಿಕೆಗಳನ್ನು ಈ ಅವಧಿಯಲ್ಲಿ ನಡೆಸಬಹುದು

ಎನ್‌ಇಪಿ ನಾಲ್ಕನೇ ವರ್ಷಾಚರಣೆ ಸಂದರ್ಭದಲ್ಲಿ ಇನ್ನೂ ಕೆಲ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ವಿವಿಧ ಭಾರತೀಯ ಭಾಷೆಗಳಲ್ಲಿ ಕಲಿಕಾ ಟಿ.ವಿ ಚಾನೆಲ್‌ಗಳು ಮತ್ತು ವೃತ್ತಿಪರ ತರಬೇತಿ ಕೋರ್ಸ್‌ಗಳಿಗೆ ಚಾಲನೆ ನೀಡಲಾಗಿದೆ. ಬೈಲ್ ಮತ್ತು ಆಡಿಯೊ ಬುಕ್‌ಗಳು ಮತ್ತು ಭಾರತೀಯ ಜ್ಞಾನ ವ್ಯವಸ್ಥೆಯ ನಾಲ್ಕು ಪುಸ್ತಕಗಳ ಬಿಡುಗಡೆ ಮಾಡಲಾಗಿದೆ.

Leave a Comment

Your email address will not be published. Required fields are marked *