ಸಮಗ್ರ ನ್ಯೂಸ್: ಕಾವೇರಿ ಜಲಾಶಯ ಇದೀಗ ಭರ್ತಿಯಾಗಿದ್ದು, ರೈತರು ಸಂತಸಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಸೇರಿ ಕಾವೇರಿಗೆ ಬಾಗಿನ ಅರ್ಪಿಸಿದರು.

ಆದ್ರೆ, ಈ ಬಾಗಿನ ಕಾರ್ಯಕ್ರಮದ ದಿನ ಬಾಡೂಟ ಆಯೋಜನೆ ಮಾಡಲಾಗಿದೆ. ಹೌದು…ಕೆಆರ್‌ಎಸ್ ಖಾಸಗಿ ಹೋಟೆಲ್ ನಲ್ಲಿ ಬಾಡೂಟ ಆಯೋಜನೆ ಮಾಡಲಾಗಿದ್ದು, ಸಿಎಂ, ಡಿಸಿಎಂ ಬಾಗಿನ ಅರ್ಪಣೆ ಮಾಡಿ ಹೊರಟು ಹೋದ ಬಳಿಕ ಇಲಾಖೆಯ ಅಧಿಕಾರಿಗಳು ಭರ್ಜರಿ ಬಾಡೂಟ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಂಪ್ರದಾಯ ಮುರಿದಿದ್ದಾರೆ.

ಈ ಹಿಂದೆ ಎಂದೂ ಬಾಗಿನ ಸಲ್ಲಿಸಿದ ದಿವಸ ಬಾಡೂಟ ಆಯೋಜಿಸಿದ್ದ ಉದಾಹರಣೆಗಳೇ ಇಲ್ಲ. ಇದೇ ಮೊದಲ ಬಾರಿಗೆ ಬಾಗಿನ ಸಲ್ಲಿಸಿದ ದಿನ ಬಾಡೂಟ ಆಯೋಜನೆ ಮಾಡಲಾಗಿದೆ. ಈ ಮೂಲಕ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಸಂಪ್ರದಾಯಕ್ಕೆ ಎಳ್ಳು ನೀರು ಬಿಟ್ಟಿದ್ದು, ಇದಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ.