ಸಮಗ್ರ ನ್ಯೂಸ್: ಸುಳ್ಯದಲ್ಲಿನ ವಿದ್ಯುತ್ ಸಮಸ್ಯೆ ಹಾಗೂ 110 ಕೆವಿ ವಿದ್ಯುತ್ ಸಬ್‌ಸ್ಟೇಷನ್ ಕಾಮಗಾರಿಯ ಬಗ್ಗೆ ವಿಧಾನಸಭೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನೆ ಎತ್ತಿದರು. ಕಾಮಗಾರಿಯು ಯಾವ ಹಂತದಲ್ಲಿದೆ, ನಿರ್ಮಾಣ ಯಾವಾಗ ಪೂರ್ತಿಗೊಳ್ಳಲಿದೆ ಎಂದು ಶಾಸಕರು ಪ್ರಶ್ನಿಸಿದ್ದರು.
ಸುಳ್ಯ 110ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಹಾಗೂ ಪ್ರಸರಣ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ವಿದ್ಯುತ್ ಉಪಕೇಂದ್ರದ ನಿಯಂತ್ರಣ ಕೊಠಡಿ ನಿರ್ಮಾಣ ಕಾರ್ಯ ಹಾಗೂ ಉಪಕೇಂದ್ರದ ಆವರಣ ಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಪ್ರಸರಣ ಮಾರ್ಗದ ಒಟ್ಟು 89 ಗೋಪುರಗಳಲ್ಲಿ, 3 ಗೋಪುರಗಳ ತಳಪಾಯ ನಿರ್ಮಾಣಗೊಂಡಿದೆ. ಗುತ್ತಿಗೆ ಕರಾರಿನಂತೆ ಉಪ ಕೇಂದ್ರದ ಕಾಮಗಾರಿಯನ್ನು ನವೆಂಬರ್ ಮೊದಲು ಪೂರ್ಣಗೊಳಿಸಲು ಕಾಲಮಿತಿ ನಿಗದಿಗೊಳಿಸಲಾಗಿದೆ ಎಂದು ಇಂದನ ಸಚಿವ ಕೆ.ಜೆ.ಜಾರ್ಜ್ ಅವರು ಉತ್ತರ ನೀಡಿದ್ದಾರೆ.
ಸುಳ್ಯ ಮತ್ತು ಕಡಬ ತಾ|ನ ಮೆಸ್ಕಾಂನ ವಿವಿಧ ಉಪವಿಭಾಗಗಳಿಗೆ ಮಂಜೂರಾದ ಮತ್ತು ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲು ಸರಕಾರ ಏನು ಕ್ರಮ ವಹಿಸಿದೆ ಎಂದು ಶಾಸಕರು ಪ್ರಶ್ನಿಸಿದ್ದು, ಸುಳ್ಯದಲ್ಲಿ 20 ಪವರ್‌ಮನ್ ಹುದ್ದೆ ಮಂಜೂರಾಗಿದ್ದು 16 ಭರ್ತಿಯಾಗಿದೆ ಎಂದ ಸಚಿವರು ಹೇಳಿದ್ದಾರೆ.