ಸಮಗ್ರ ನ್ಯೂಸ್: ಮುಡಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡದ ಹಿನ್ನಲೆ ವಿಧಾನಸಭೆ ಒಳಗಡೆಯೇ ಬಿಜೆಪಿ ಹಾಗೂ ಜೆಡಿಎಸ್ ಅಹೋರಾತ್ರಿ ಧರಣಿ ನಡೆಸಿದೆ. ಸದನದ ಬಾವಿಯೊಳಗೇ ಹಾಡು, ಭಜನೆಯ ಮಾಡಿದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಸ್ವಂತ ಖರ್ಚಿನಲ್ಲಿಯೇ ಊಟ ತರಿಸಿಕೊಂಡು ಊಟ ಮಾಡಿದರು. ಬಳಿಕ ಸೋಫಾ, ನೆಲದ ಮೇಲೆ ಮಲಗಿದರು.
ವಿಧಾನಸೌಧದಲ್ಲಿ ಸ್ಪೀಕರ್ ಊಟೋಪಚಾರವನ್ನು ತಿರಸ್ಕರಿಸಿದ ಪ್ರತಿಪಕ್ಷ ನಾಯಕರು, ಸ್ವಂತ ಖರ್ಚಿನಲ್ಲೇ ವಿಧಾನಸೌಧಕ್ಕೆ ಊಟ ತರಿಸಿಕೊಂಡು ಊಟ ಮಾಡಿದರು. ಭ್ರಷ್ಟಾಚಾರದ ಹಣದಲ್ಲಿ ನಾವು ಊಟ ಮಾಡುವುದಿಲ್ಲ ಎಂದು ಅವರು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಸುರೇಶ್ ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಹಲವು ನಾಯಕರು ಅಹೋರಾತ್ರಿ ಧರಣಿ ನಡೆಸಿದರು. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಧರಣಿ ನಿಲ್ಲುವುದಿಲ್ಲ ಎಂದು ಆರ್.ಅಶೋಕ್ ತಿಳಿಸಿದ್ದಾರೆ. ನಂತರ ವಿಜಯೇಂದ್ರ ನೇತೃತ್ವದಲ್ಲಿ ಭಜನೆ ಪ್ರಾರಂಭಿಸಿದ್ದಾರೆ.
ವಿಪಕ್ಷ ನಾಯಕರ ಸಂಧಾನಕ್ಕೆ ಸ್ಪೀಕರ್ ಕರೆದರು. ಅಹೋರಾತ್ರಿ ಧರಣಿ ನಿಲ್ಲಿಸಲು ಮನವಿ ಮಾಡಿದರು ಆದರೆ ವಿಪಕ್ಷ ನಾಯಕರು ಯಾವುದೇ ಹೋರಾಟ ಹಿಂಪಡೆಯಲ್ಲ ಎಂದಿದ್ದಾರೆ.