ಸಮಗ್ರ ನ್ಯೂಸ್: ಶೃಂಗೇರಿಯ ಶಾರದಾಂಬೆ ದೇವಾಲಯದಲ್ಲಿ ಆ.15 ರಿಂದ ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯವಾಗಲಿದೆ. ದೇವಾಲಯ ಪ್ರವೇಶಿಸುವವರು ಸಂಪ್ರದಾಯಬದ್ಧ ಭಾರತೀಯ ಉಡುಪಿನಲ್ಲಿದ್ದರೆ ಮಾತ್ರ ದೇವಾಲಯದಲ್ಲಿ ಹತ್ತಿರದಿಂದ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ದೇವಾಲಯ ಹಾಗೂ ಶೃಂಗೇರಿ ಮಠದ ಆಡಳಿತಾಧಿಕಾರಿಗಳು ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.
ಒಂದು ವೇಳೆ ಭಾರತೀಯ ಉಡುಪುಗಳನ್ನಲ್ಲದೇ ಬೇರೆ ಉಡುಪುಗಳನ್ನು ಧರಿಸಿದರೆ, ದೇವಾಲಯದಲ್ಲಿ ಅರ್ಧ ಮಂಟಪದಿಂದ ಹೊರಭಾಗದಲ್ಲಿ ನಿಂತು ದೇವರ ದರ್ಶನ ಪಡೆಯಬೇಕಾಗುತ್ತದೆ ಅವರಿಗೆ ಒಳ ಭಾಗದಲ್ಲಿರುವ ಪರಿಕ್ರಮಕ್ಕೆ ಪ್ರವೇಶವಿರುವುದಿಲ್ಲ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಪುರುಷರು ಧೋತಿ, ಶಲ್ಯ, ಉತ್ತರೀಯ (ಅಂಗವಸ್ತ್ರ) ಮಹಿಳೆಯರು ಸೀರೆ, ಸಲ್ವಾರ್ ಜೊತೆಗೆ ದುಪಟ್ಟಾ, ಲಂಗಾ ದಾವಣಿ ಧರಿಸಿ ದೇವಾಲಯವನ್ನು ಪ್ರವೇಶಿಸಬಹುದಾಗಿದೆ.
ಈ ಹಿಂದೆ ಶ್ರೀಮಠದ ಗುರು ನಿವಾಸದಲ್ಲಿ ಗುರುಗಳ ದರ್ಶನ ಪಡೆಯುವುದಕ್ಕೆ ವಸ್ತ್ರ ಸಂಹಿತೆ ಜಾರಿಯಲ್ಲಿತ್ತು ಈಗ ಆ.15 ರಿಂದ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೂ ವಸ್ತ್ರ ಸಂಹಿತೆ ಕಡ್ಡಾಯವಾಗಿ ಜಾರಿಯಾಗಲಿದೆ.
ದೇವಾಲಯದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗಿದೆ. ಹಲವು ಮಂದಿ ಈ ಹಿಂದೆ ಸೂಕ್ತ ವಸ್ತ್ರ ಸಂಹಿತೆ ಪಾಲನೆ ಮಾಡದೇ ದೇವಾಲಯಕ್ಕೆ ಪ್ರವಾಸಿಗರ ರೀತಿಯಲ್ಲಿ ಪ್ರವೇಶಿಸಿದ್ದನ್ನು ಭಕ್ತಾದಿಗಳು ಉಲ್ಲೇಖಿಸಿ ವಸ್ತ್ರ ಸಂಹಿತೆ ನೀತಿ ಜಾರಿಯನ್ನು ಸ್ವಾಗತಿಸಿದ್ದಾರೆ.