ಸಮಗ್ರ ನ್ಯೂಸ್: ರಾಷ್ಟ್ರೀಯ ಹೆದ್ದಾರಿ – 275ರ ಸಂಪಾಜೆಯಿಂದ ಮಡಿಕೇರಿ ಮಧ್ಯೆ 4 ದಿನಗಳ ಕಾಲ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ತನಕ ವಾಹನ ಸಂಚಾರ ನಿಷೇಧ ಮಾಡಿ ಕೊಡಗು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆಯಿಂದ ಮಡಿಕೇರಿ ನಡುವಿನ ಕಿ.ಮೀ. 90.05 ರಿಂದ 90.10ರ ಕರ್ತೋಜಿ ಬಳಿ ತೀವ್ರ ಮಳೆಯಿಂದಾಗಿ ರಸ್ತೆಯ ಬಲಬದಿ ಗುಡ್ಡ ಕುಸಿಯುವ ಸಾಧ್ಯತೆ ಇದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಈ ಭಾಗದಲ್ಲಿ ದಿನಾಂಕ 18.07.2024 ರಿಂದ 22.07.2024ರ ವರೆಗೆ ಪ್ರತಿ ದಿನ ರಾತ್ರಿ 8.00 ಗಂಟೆಯಿಂದ ಮರುದಿನ ಬೆಳಗ್ಗೆ 6.00 ಗಂಟೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ನೀಡಿರುವ ವರದಿಯಂತೆ ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಅತಿ ಹೆಚ್ಚಿನ ಮಳೆಯಾಗುವ ಎಚ್ಚರಿಕೆ ಇರುತ್ತದೆ. ತುರ್ತು ಸೇವೆಗಳ ಮತ್ತು ಪ್ರಕೃತಿ ವಿಕೋಪ ಸಂಬಂಧಿತ ಕಾರ್ಯದ ನಿಮಿತ್ತ ಕಾರ್ಯನಿರ್ವಹಿಸುವ ಅಧಿಕಾರಿ / ಸಿಬ್ಬಂದಿಗಳು ಸಂಚರಿಸುವ ವಾಹನಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುವುದು.
ಜಿಲ್ಲೆಯ ಮುಖಾಂತರ ಮೈಸೂರು, ಬೆಂಗಳೂರು ಮುಂತಾದ ಸ್ಥಳಗಳಿಗೆ ಸಂಚರಿಸುವ ವಾಹನಗಳು ಬದಲಿ ರಸ್ತೆಯಾದ ಚಾರ್ಮಾಡಿ ಘಾಟ್ ಕೊಟ್ಟಿಗೆಹಾರ ಮಾರ್ಗವನ್ನು ಬಳಸಬಹುದಾಗಿದೆ ಎಂದು ಸೂಚಿಸಲಾಗಿದೆ.