ಸಮಗ್ರ ನ್ಯೂಸ್: ಆನ್ಲೈನ್ ನಲ್ಲಿ ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ದೃಶ್ಯ ವೀಕ್ಷಿಸಿದ ವ್ಯಕ್ತಿಯ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧ ಹೊರಿಸಲಾಗದು ಎಂದು ಹೈಕೋರ್ಟ್ ಆದೇಶ ನೀಡಿದೆ. ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಅಪರಾಧವಲ್ಲ, ಅಪ್ ಲೋಡ್, ಪ್ರಸರಣ ಮಾಡುವುದು ಅಪರಾಧವೆಂದು ಹೇಳಿ ಪ್ರಕರಣ ರದ್ದುಪಡಿಸಲಾಗಿದೆ.
ವೆಬ್ಸೈಟ್ನಲ್ಲಿ ಮಕ್ಕಳ ಅಶ್ಲೀಲ ಫೋಟೋ ಮತ್ತು ವಿಡಿಯೋ ವೀಕ್ಷಿಸಿದ ಆರೋಪದ ಮೇಲೆ ತನ್ನ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಿಇಎನ್ ಠಾಣೆ ಪೊಲೀಸರು ದಾಖಲಿಸಿದ ಎಫ್‌ಐಆರ್ ರದ್ದು ಮಾಡುವಂತೆ ಕೋರಿ ಬೆಂಗಳೂರು ಹೊಸಕೋಟೆಯ ಎನ್. ಇನಾಯತ್ ಉಲ್ಲಾ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠ ಈ ಆದೇಶ ನೀಡಿದ್ದು, ಎಫ್‌ಐಆರ್ ರದ್ದು ಮಾಡಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67(ಬಿ) ಪ್ರಕಾರ ವಿದ್ಯುನ್ಮಾನ ರೂಪದಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು ಪ್ರಸಾರ, ಪ್ರಕಟಣೆ, ರವಾನಿಸುವುದು ಅಪರಾಧವಾಗಿದೆ. ಆದರೆ ಈ ಪ್ರಕರಣದಲ್ಲಿ ಅರ್ಜಿದಾರರು ಅಶ್ಲೀಲ ದೃಶ್ಯ ನೋಡಿದ್ದಾರೆ. ಹಾಗಾಗಿ ಅದು ಆರೋಪಿಸಲಾದ ಐಟಿ ಕಾಯ್ದೆ ಸೆಕ್ಷನ್ 67(ಬಿ) ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಅರ್ಜಿದಾರರು ಅಶ್ಲೀಲ ದೃಶ್ಯ ನೋಡುವ ಚಟಕ್ಕೆ ದಾಸರಾಗಿರಬಹುದು. ಅದನ್ನು ಬಿಟ್ಟರೆ ಅವರ ವಿರುದ್ಧ ಬೇರೆ ಆರೋಪಗಳಿಲ್ಲ. ಆದ್ದರಿಂದ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣ ಮುಂದುವರಿಸಲಾಗದು ಎಂದು ನ್ಯಾಯಪೀಠ ತಿಳಿಸಿದೆ.