ಸಮಗ್ರ ನ್ಯೂಸ್: ಸ್ವರಕ್ಷಣೆಯ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಅಗತ್ಯವಾಗಿದ್ದು, ಮುಂದಿನ ದಿನದಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗುವುದು. ಸರ್ಕಾರದಿಂದ ಎಲ್ಲಾ ಸಿಗುತ್ತದೆ ಎಂದು ಕಾಯದೆ, ನಮ್ಮಿಂದಾಗುವುದನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಮುಳಿಯ ಮಾಡುತ್ತಿದೆ. ಸಂಸ್ಥೆಯ ಸಿಬ್ಬಂದಿಗಳಿಗೆ ಸೇರಿ ಆಸುಪಾಸಿನ ಜನರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಹೇಳಿದರು.
ಬುಧವಾರ (ಜು. 17) ಜೆಸಿಐ ಮುಳಿಯ ಟ್ರೈನಿಂಗ್ ಹಾಲ್ ನಲ್ಲಿ ಮುಳಿಯ ಜ್ಯುವೆಲ್ಸ್ ಪುತ್ತೂರು, ಮಹಿಳಾ ಪೊಲೀಸ್ ಠಾಣೆ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಯುವ ಸಹಯೋಗದಲ್ಲಿ ನಡೆದ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುತ್ತೂರು ಮಹಿಳಾ ಠಾಣೆಯಾ ಉಪನಿರೀಕ್ಷಕಿ ಭವಾನಿ ಮಾತನಾಡಿ ಪೊಕ್ಸೋ ಕಾಯ್ದೆಯಲ್ಲಿ ೧೮ ವರ್ಷದ ಒಳಗಿನ ಗಂಡು ಹೆಣ್ಣು ಬೇಧವಿಲ್ಲದೆ ಮಕ್ಕಳೆಂದು ಪರಿಗಣಿಸಲಾಗುತ್ತದೆ. ಪ್ರಕರಣಗಳಲ್ಲಿ ದೂರು ದಾಖಲಾದಾಗ ಕೇವಲ ಆರೋಪಿಗಳಾಗಿದ್ದರೆ, ಪೊಕ್ಸೋದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಅವರು ಅಪರಾಧಿಗಳಾಗಿರುತ್ತಾರೆ. ಪೋಷಕರು ತಮ್ಮ ಮಕ್ಕಳ ಚಲನವಲಗಳ ಬಗ್ಗೆ ನಿಗಾ ಇಡುವ ಜತೆಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿಗಳಿಗೆ ಮುಳಿಯ ಜ್ಯುವೆಲ್ಸ್ ವತಿಯಿಂದ ರೈನ್ ಕೋಟ್ ವಿತರಣೆ ಮಾಡಲಾಯಿತು. ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಪುತ್ತೂರು ಮಹಿಳಾ ಠಾಣೆಯಾ ಉಪನಿರೀಕ್ಷಕಿ ಸರಿತಾ ಉಪಸ್ಥಿತರಿದ್ದರು.