ಸಮಗ್ರ ನ್ಯೂಸ್: ಕರಾವಳಿಯ ಅಡಿಕೆ ವ್ಯಾಪಾರಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಗುಜರಾತಿ ಸೇಠುಗಳು ಮಾಲಿನೊಂದಿಗೆ ಎಸ್ಕೇಪ್ ಆಗಿರುವ ಕುರಿತಂತೆ ದೂರೊಂದು ದಾಖಲಾಗಿದೆ. ಇದೀಗ ವಂಚನೆಗೆ ಒಳಗಾದ ನಮ್ಮ ಅಡಿಕೆ ವ್ಯಾಪಾರಿಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಗುಜರಾತ್ ಮೂಲದ ಮೂವರು ಅಡಿಕೆ ವ್ಯಾಪಾರಿಗಳು ವಂಚಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಅದರಲ್ಲೂ ಸುಮಾರು ಮೂವತ್ತು ವರ್ಷಕ್ಕಿಂತಲೂ ಹೆಚ್ಚು ಕಾಲ ಇಲ್ಲಿ ಅಡಿಕೆ ವ್ಯಾಪಾರಿ ಮಾಡುತ್ತಿದ್ದ ಸೇಠು ಒಬ್ಬರು ಕೂಡ ಪರಾರಿಯಾಗಿದ್ದಾಗಿ ಹೇಳಲಾಗಿದೆ. ಹಣ ಕಳೆದುಕೊಂಡ ದ.ಕ ಜಿಲ್ಲೆಯ ಅಡಿಕೆ ವ್ಯಾಪಾರಿಗಳು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಈ ಸೇಠುಗಳಿಂದ ವಂಚನೆಗೆ ಒಳಗಾದ ಮಂಗಳೂರಿನ ಅಡಿಕೆ ವ್ಯಾಪಾರಿ ಯೂಸುಫ್ ಎಂಬವರು ತನಗೆ 8.98 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಇದೀಗ ಮಂಗಳೂರು ಉತ್ತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇವರು ಮಂಗಳೂರಿನ ಬೀಬಿ ಅಲಾಬಿ ರಸ್ತೆಯಲ್ಲಿ ಅಡಿಕೆ ವ್ಯಾಪಾರಿಯಾಗಿದ್ದು ಗುಜರಾತ್ ನ ಕಮಲೇಶ್ ಪಡಾಲಿಯಾ ಎಂಬಾತನಿಗೆ 14,98,770 ರೂಪಾಯಿ ಮೌಲ್ಯದ ಅಡಿಕೆ ಮಾರಾಟ ಮಾಡಿದ್ದರು. ಅದರಲ್ಲಿ ಹಂತ ಹಂತವಾಗಿ ತ 6 ಲಕ್ಷ ರೂಪಾಯಿ ನೀಡಿದ್ದಾನೆ. ಉಳಿದ 8,98,770 ರೂ.ಗಳನ್ನು ನೀಡಿಲ್ಲ. ಸದ್ಯ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಆತನಿಗೆ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ನಲ್ಲಿ ಗೋದಾಮು ಇದ್ದು ಅದನ್ನು ಮುಚ್ಚಲಾಗಿದೆ. ಆತನ ಗೋದಾಮಿ ನಲ್ಲಿದ್ದ ಸುಮಾರು 115 ಚೀಲ ಅಡಿಕೆಯನ್ನು ಆತನ ಸಂಬಂಧಿಕರಾದ ಭಗವಾನ ಜಿ. ಲಕ್ಷ್ಮೀದಾಸ್ ಹಿಂಸು ಮತ್ತು ದಿಲೀಪ್ ಕುಮಾರ್ ಲಕ್ಷ್ಮೀದಾಸ್ ಹಿಂಸು ಅವರ ಗೋದಾಮಿಗೆ ಹಸ್ತಾಂತರಿಸಿದ್ದಾನೆ ಎನ್ನಲಾಗಿದೆ. ಪ್ರಸ್ತುತ ಮೂವರು ಕೂಡ ಗೋದಾಮನ್ನು ಮುಚ್ಚಿ ಪರಾರಿಯಾಗಿದ್ದಾರೆ ಎಂದು ಯೂಸಫ್ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಪುತ್ತೂರು , ಬೆಳ್ಳಾರೆ ಸುಳ್ಯಭಾಗದ ಅಡಿಕೆ ವ್ಯಾಪಾರಸ್ಥರಿಗೆ ಇದೇ ಮೂವರು ಸೇಠ್ ಗಳು ಹಣ ನೀಡದೆ ವಂಚಿಸಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಇನ್ನು ಎಲ್ಲಾ ಸೇಠುಗಳು ಸೇರಿ ಸುಮಾರು 50 ಕೋಟಿಗೂ ಹೆಚ್ಚು ವಂಚಿಸಿದ್ದಾರೆ ಎನ್ನಲಾಗುತ್ತಿದೆ. ಹಲವರಿಗೆ ವಂಚಿಸಿದ್ದು ಇನ್ನಷ್ಟು ದೂರುಗಳು ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ವಂಚನೆಗೊಳಗಾದವರು ಒಂದಷ್ಟು ಮಂದಿ ಗುಜರಾತಿಗೆ ಹುಡುಕಿಕೊಂಡು ಹೋದ ವೇಳೆ ಅಲ್ಲಿ ಈ ಸೇಠುಗಳ ಸಂಬಂಧಿಕರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೆಲವು ಅಡಿಕೆ ವ್ಯಾಪಾರಿಗಳು ಹೇಳಿದ್ದಾರೆ.
ಒಟ್ಟಾರೆ ಭಾಯಿ ಭಾಯಿ ಎಂದು ಹಲ್ಕಿರಿದು ವ್ಯಾಪಾರ ನಡೆಸುತ್ತಿದ್ದ ಗುಜರಾತಿ ಸೇಠುಗಳನ್ನ ನಂಬಿ ಅಡಿಕೆ ಮಾರಾಟ ಮಾಡಿದ ಹಲವು ವ್ಯಾಪಾರಸ್ಥರು ಮೋಸ ಹೋಗಿದ್ದು, ಪೊಲೀಸ್ ತನಿಖೆಯಿಂದ ಆರೋಪಿಗಳು ಪತ್ತೆಯಾಗಬೇಕಿದೆ.