ಸಮಗ್ರ ನ್ಯೂಸ್: ಅವಿಭಜಿತ ದ.ಕ.ಜಿಲ್ಲೆಯಲ್ಲಿ ರೈತರ ಕುಮ್ಕಿ ಜಮೀನನ್ನು 30 ವರ್ಷಗಳ ಕಾಲ ಲೀಸಿಗೆ ನೀಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಂದು ಎಕರೆಗೆ 1 ಸಾವಿರ ರುಪಾಯಿಯಿಂದ ಹಿಡಿದು, 25 ಎಕರೆಗೆ 3,500 ರೂ ರೀತಿ ರಾಜ್ಯ ಸರ್ಕಾರ ಕುಮ್ಕಿ ಭೂಮಿಯನ್ನೂ ರೈತರಿಗೆ ಲೀಸ್‌ಗೆ ನೀಡಲು ಮುಂದಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಬೆಲೆ ಹೆಚ್ಚಳ, ಸರ್ಕಾರದ ಆಸ್ತಿ ಮಾರಾಟ ಸೇರಿದಂತೆ ಪರ್ಯಾಯ ಮಾರ್ಗ ಹುಡುಕುತ್ತಿರುವ ಸರ್ಕಾರ ಈಗ ಕುಮ್ಕಿ ಭೂಮಿಯನ್ನು ಭೋಗ್ಯಕ್ಕೆ ನೀಡಲು ಹೊರಟಿದೆ. ಎಕರೆಗೆ 1 ಸಾವಿರದಂತೆ ಬೆಲೆ ನಿಗದಿ ಮಾಡಿರುವ ಕಾಂಗ್ರೆಸ್ ಸಣ್ಣ ಹಿಡುವಳಿದಾರರಿಗೆ ದೊಡ್ಡ ಹೊಡೆತ ನೀಡಲು ಮುಂದಾಗಿದೆ ಎಂದು ಕಿಡಿಕಾರಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ (ಉಡುಪಿ-ದಕ್ಷಿಣ ಕನ್ನಡ) ಮದರಾಸು ಪ್ರಾಂತ್ಯದ ಕಂದಾಯ ಆಡಳಿತ 1896ರ ಬಿಎಸ್‌ಒ 15(40)ರ ನಿಯಮಗಳ ಆಧಾರದಲ್ಲಿ ಕದೀಂ ವರ್ಗ ಜಮೀನಿನಲ್ಲಿ ಕೃಷಿ ಮಾಡುವ ರೈತರಿಗೆ 100 ಮೀ.ವರೆಗಿನ ಭೂಮಿ(ಕದೀಂ ವರ್ಗದಿಂದ 450 ಲಿಂಕ್ಸ್)ಯನ್ನು ಕುಮ್ಕಿ ಸವಲತ್ತಿನ ಭೂಮಿ ಎಂದು ಕೊಡಲಾಗಿದೆ. ಈ ಕುಮ್ಕಿ ಜಾಗವನ್ನು ಕೃಷಿಗೆ ಪೂರಕವಾದ ಮೇವು, ಸೊಪ್ಪುಗಳ ಬಳಕೆಗೆ ಕೊಡಲಾಗಿತ್ತು. 1964ರಲ್ಲಿ ರಾಜ್ಯದ ಒಂದೇ ಕಾಯಿದೆ ಜಾರಿಯಾದರೂ ಕಾಯಿದೆ ಕಲಂ 202(2)ರಲ್ಲಿ ನೀಡಿರುವಂತೆಯೇ ಯಾವುದೇ ಹಕ್ಕು, ಸೌಲಭ್ಯ, ಬಾಧ್ಯತೆಗಳಿಲ್ಲ ಎದಂ ಉಲ್ಲೇಖಿತವಿದೆ ಜೊತೆಗೆ ಕಾನೂನಿನಲ್ಲಿಯೂ ಎಲ್ಲ ಸೌಲಭ್ಯಗಳು ಮತ್ತು ಹಕ್ಕು ಊರ್ಜಿತದಲ್ಲಿದೆ.
2013ರಲ್ಲಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿರುವಂತೆ ಕುಮ್ಕಿ ಹಕ್ಕು ‘ದಿ ಶ್ಯಾಡೋ ಆಫ್ ದಿ ಮ್ಯಾನ್’. ಈ ವಿಚಾರದಲ್ಲಿ ಸರಕಾರ ಹಸ್ತಕ್ಷೇಪ ಮಾಡುವಂತಿಲ್ಲ. ಕರ್ನಾಟಕ ಭೂಕಂದಾಯ 79/2ಬಿ ಪ್ರಕಾರ ವರ್ಗ ಭೂಮಿ ಇರುವವರಿಗೆ ಕುಮ್ಕಿ ಹಕ್ಕು ಮುಂದುವರೆಯಲಿದೆ ಎಂದಿದೆ. ಹೈಕೋರ್ಟ್ ನ ಈ ಆದೇಶ ಇದ್ದರೂ ಸರ್ಕಾರ ಹೊಸ ನಿಯಮ ಜಾರಿಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಲೀಸ್‌ನ ಮೊತ್ತ ಎಷ್ಟು: ಲೀಸ್‌ಗೆ ಜಮೀನು ಪಡೆಯಬೇಕಾದರೆ ವಾರ್ಷಿಕವಾಗಿ ನಿರ್ದಿಷ್ಟ ಮೊತ್ತವನ್ನೂ ಸರ್ಕಾರ ನಿಗದಿಪಡಿಸಿದೆ. 1 ಎಕರೆಗೆ 1 ಸಾವಿರ ರು., 1ರಿಂದ 5 ಎಕರೆಗೆ 1,500 ರು., 5 ರಿಂದ 10 ಎಕರೆಗೆ 2 ಸಾವಿರ ರು., 10ರಿಂದ 15 ಎಕರೆಗೆ ಪ್ರತಿ ಎಕರೆಗೆ 2,500 ರು., 15ರಿಂದ 20 ಎಕರೆಗೆ 3 ಸಾವಿರ ರು., 20ರಿಂದ 25 ಎಕರೆಗೆ 3,500 ರು. ಮೊತ್ತವನ್ನು ರೈತರು ಏಕಕಂತಿನಲ್ಲಿ ಪಾವತಿಸಬೇಕಿದೆ.
ಅವಿಭಜಿತ ದ.ಕ.ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಅರ್ಜಿ ಶೇ.70ರಷ್ಟು ವಿಲೇವಾರಿಗೊಂಡಿದೆ. ಈಗ ಕುಮ್ಕಿ ಹಕ್ಕಿನ ಮೇಲೆ ಸರ್ಕಾರ ಕಣ್ಣಿಟ್ಟಿದ್ದು, ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಮೊತ್ತ ವಸೂಲಿಗೆ ಮುಂದಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಕುಮ್ಕಿ ಹಕ್ಕು ಸಕ್ರಮಗೊಳಿಸಲು ಅಂತಿಮ ಸಿದ್ಧತೆ ನಡೆಸಲಾಗಿತ್ತು. ಒಮ್ಮೆ ಲೀಸ್ ನೀಡಿದರೆ ಮತ್ತೆ ಜಮೀನು ಕೃಷಿಕರದ್ದಾಗಿರಲು ಸಾಧ್ಯವಿಲ್ಲ. ಈ ಹಿಂದೆ ಸರ್ಕಾರವೇ ಕುಮ್ಕಿ ಹಕ್ಕು ನೀಡಿದ್ದು, ಈಗ ಕಾಂಗ್ರೆಸ್ ಸರ್ಕಾರ ಕಿತ್ತುಕೊಂಡು ಖಜಾನೆ ತುಂಬಿಸಲು ಹೊರಟಿದೆ ಎಂದು ಬಿಜೆಪಿ ಆರೋಪಿಸಿದೆ.