ಸಮಗ್ರ ನ್ಯೂಸ್: ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿಗೆ ಮಕ್ಕಳ ಪ್ರವೇಶಕ್ಕೆ ಎದುರಾಗುತ್ತಿದ್ದ ಗರಿಷ್ಠ ವಯೋಮಿತಿ ಗೊಂದಲಕ್ಕೆ ಶಿಕ್ಷಣ ಇಲಾಖೆ ವಯೋಮಿತಿ ನಿಗದಿಪಡಿಸಿ ಪರಿಹಾರ ಕಲ್ಪಿಸಿದೆ. ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ಹಾಗೂ ಗರಿಷ್ಠ ವಯೋಮಿತಿಯನ್ನು ಕ್ರಮವಾಗಿ 4 ರಿಂದ 6 ವರ್ಷ, 5ರಿಂದ 7 ವರ್ಷ ಮತ್ತು 6ರಿಂದ 8 ವರ್ಷಗಳಿಗೆ ನಿಗದಿಪಡಿಸಿ, 2023-24ನೇ ಸಾಲಿನಿಂದ ಪೂರ್ವಾನ್ವಯವಾಗುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಇದರ ಜೊತೆಗೆ 8 ವರ್ಷ ದಾಟಿದ ಮಕ್ಕಳಿಗೆ 1ನೇ ತರಗತಿ ಪ್ರವೇಶವನ್ನು ನಿರ್ಬಂಧಿಸಿದ್ದು, ವಯಸ್ಸಿಗೆ ಅನುಗುಣವಾಗಿ ಬೇರೆ ತರಗತಿಗೆ ಪ್ರವೇಶ ನೀಡಲು ನಿರ್ಧರಿಸಿದೆ. 8 ವರ್ಷಕ್ಕಿಂತ ಹೆಚ್ಚು ವಯೋಮಾನದ ಮಕ್ಕಳು ಶಾಲೆಗೆ ಪ್ರವೇಶ ಪಡೆಯಬೇಕಿದ್ದಲ್ಲಿ, ಅವರನ್ನು ಶಾಲೆಯಿಂದ ಹೊರಗುಳಿದ ಮಕ್ಕಳು ಎಂದು ವಿಶೇಷವಾಗಿ ಪರಿಗಣಿಸಿ ವಯೋಮಾನಕ್ಕೆ ತಕ್ಕಂತೆ ತರಗತಿಗಳಿಗೆ ಪ್ರವೇಶ ನೀಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಂ.ಎಸ್.ಪ್ರಸನ್ನಕುಮಾರ್ ತಿಳಿಸಿದ್ದಾರೆ.