ಸಮಗ್ರ ನ್ಯೂಸ್: ಕರ್ನಾಟಕಕ್ಕೆ ಮತ್ತೆ ಶಾಕ್ ಎದುರಾಗಿದೆ. ಹೌದು ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ಕರ್ನಾಟಕಕ್ಕೆ ಮತ್ತೆ ಶಾಕ್ ನೀಡಿದೆ. ಕರ್ನಾಟಕದ ಜಲಾಶಯಗಳಿಗೆ ಒಳಹರಿವು ಪ್ರಮಾಣ ಕಡಿಮೆ ಇದೆ ಎಂಬುದಾಗಿ ಕರ್ನಾಟಕ ಈ ಹಿಂದೆ ಮನವಿ ಮಾಡಿದರೂ ಜುಲೈ 12ರಿಂದ 31ರವರೆಗೆ ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ಸಮಿತಿ ಸಭೆಯಲ್ಲಿ ಕರ್ನಾಟಕಕ್ಕೆ ಸಿಡಬ್ಲ್ಯೂಆರ್‌ಸಿ ಸೂಚಿಸಿದೆ.
ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಆಗಿದೆ. ನಾಲ್ಕೂ ಜಲಾಶಯಗಳಲ್ಲಿ 58.66 ಟಿಎಂಸಿ ನೀರಿನ ಕೊರತೆ ಇದೆ. ಹಾಗಾಗಿ, ಸಿಡಬ್ಲ್ಯೂಆರ್‌ಸಿಯು ಜುಲೈ 25ರವರೆಗೆ ಕಾಯಬೇಕು. ಅಲ್ಲಿಯವರೆಗೆ ನೀರು ಹರಿಸುವಂತೆ ಆದೇಶಿಸಬಾರದು ಎಂದು ಕರ್ನಾಟಕ ತಿಳಿಸಿತ್ತು. ಫೆಬ್ರವರಿಯಿಂದ ಮೇವರೆಗೆ ಕರ್ನಾಟಕವು ಪ್ರತಿ ತಿಂಗಳು 2.50 ಟಿಎಂಸಿಯಂತೆ ಪರಿಸರ ಹರಿವನ್ನು ನಿರಂತರವಾಗಿ ಬಿಡುಗಡೆ ಮಾಡಬೇಕು ಎಂದು ಕಳೆದ ಫೆಬ್ರವರಿಯಲ್ಲಿಯೇ ತಮಿಳುನಾಡು ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ವಾದ ಮಂಡಿಸಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಕರ್ನಾಟಕವು ತಮಿಳುನಾಡಿಗೆ ನೀರು ಬಿಟ್ಟಿತ್ತು.
ಆದರೆ, ಮೇ ಅಂತ್ಯದವರೆಗೂ ನೀರು ಬಿಡಬೇಕು ಎಂಬುದು ತಮಿಳುನಾಡಿನ ವಾದವಾಗಿತ್ತು. ಇದನ್ನು ಸಿಡಬ್ಲ್ಯೂಆರ್‌ಸಿ ನಿರಾಕರಿಸಿತ್ತು. ಆದರೀಗ ಮತ್ತೆ ನೀರು ಬಿಡಬೇಕು ಎಂದು ಸಮಿತಿಯ ಸಭೆಯಲ್ಲಿ ಶಿಫಾರಸು ಮಾಡಿದೆ.