Ad Widget .

ಸುಳ್ಯ: ಕುಡುಕರನ್ನು ಓಡಿಸಲು‌ ಕುಡಿದು ಬಂದ ಹೊಯ್ಸಳ ಪೊಲೀಸರು!? ಗುತ್ತಿಗಾರಿನಲ್ಲೊಂದು ವಿಲಕ್ಷಣ ಘಟನೆ

ಸಮಗ್ರ ನ್ಯೂಸ್: ಬಸ್ ನಿಲ್ದಾಣದಲ್ಲಿ ಮದ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರನ್ನು ಅಲ್ಲಿಂದ ಓಡಿಸಲು ಬಂದ ಪೋಲೀಸರೇ ಕುಡಿದು ಬಂದಿದ್ದರೆಂದು ಸಾರ್ವಜನಿಕರಿಗೆ ಅನುಮಾನ ಬಂದು ಪೊಲೀಸರನ್ನೇ ಪ್ರಶ್ನಿಸಿದ ವಿಲಕ್ಷಣ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ‌ಭಾರೀ ವೈರಲ್ ಅಗುತ್ತಿದ್ದು, ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

Ad Widget . Ad Widget .

ಜು.10 ರಂದು ಗುತ್ತಿಗಾರು ಬಸ್ ನಿಲ್ದಾಣದಲ್ಲಿ ಕೆಲಮದಿ ಕುಡಿದು ಮಲಗಿದ್ದು,‌ ಇವರಿಂದ ತೊಂದರೆ ಆಗುತ್ತಿರುವುದನ್ನು ಗಮನಿಸಿದ ಮಹಿಳೆಯೋರ್ವರು ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ ಕರೆಮಾಡಿ ದೂರು ನೀಡಿದ್ದರು. ಬಸ್ ನಿಲ್ದಾಣದಲ್ಲಿದ್ದ ಆ ಕುಡುಕರು ಅಲ್ಲಿ ಬಾಟಲಿ ಒಡೆದು ಬಾಟಲಿ ಚೂರುಗಳನ್ನು ಚೆಲ್ಲಿದ್ದರಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿತ್ತು.

Ad Widget . Ad Widget .

ಕರೆಯ ಆಧಾರದಲ್ಲಿ ಸ್ಥಳಕ್ಕೆ ಹೊಯ್ಸಳ ಪೋಲಿಸರು ಬಂದಿದ್ದು, ಅವರು ಕುಡುಕರನ್ನು ಗದರಿಸದೆ ವಾಹನದೊಳಗೆ ಕುಳಿತಿರುವುದನ್ನು ಕಂಡ ಸಾರ್ವಜನಿಕರು ಅನುಮಾನಗೊಂಡರು. ಪೊಲೀಸರೇ ಕುಡಿದು ಬಂದಿದ್ದಾರೆಂದು ತಿಳಿದುಕೊಂಡ ಸಾರ್ವಜನಿಕರು ಮೊಬೈಲ್ ನಲ್ಲಿ ಪೋಲೀಸರ ಚಲನವಲನವನ್ನು ಸೆರೆಹಿಡಿದಿದ್ದಾರೆ.

ಇನ್ನು ಕೆಲ ಮಂದಿ ನೇರವಾಗಿ ಪೋಲೀಸರನ್ನು ಈ ಬಗ್ಗೆ ಪ್ರಶ್ನಿಸಿ, ಅದನ್ನು ವೀಡಿಯೋ ಮಾಡಿಕೊಂಡರು.‌ ಜೊತೆಗೆ ‘ಕುಡಿದು ವಾಹನ ಚಲಾಯಿಸಬೇಡಿ’ ಎಂದು ಪೊಲೀಸರಿಗೇ ಬುದ್ದಿ ಹೇಳುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಒಟ್ಟಾರೆ ಸಮಾಜವನ್ನು ರಕ್ಷಣೆ ಮಾಡಬೇಕಾದ ಪೊಲೀಸರ ಈ ರೀತಿಯ ವರ್ತನೆಯಿಂದ ಸಾರ್ವಜನಿಕರು ಕಂಗಾಲಾಗಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಪೊಲೀಸರು ಈ ಹಿಂದೆಯೂ ಕರ್ತವ್ಯದಲ್ಲಿದ್ದಾಗ ಮದ್ಯ ಸೇವಿಸುತ್ತಾರೆ ಎಂಬ ಆರೋಪಗಳು ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

Leave a Comment

Your email address will not be published. Required fields are marked *