ಸಮಗ್ರ ನ್ಯೂಸ್: ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ವಿಶ್ವಾಸಕ್ಕೆ ಅನ್ವರ್ಥವಾಗಿರುವ ಶ್ವಾನಗಳು ತಮ್ಮ ಮಾಲೀಕನಾಗಿ ಎಂತಹ ತ್ಯಾಗಕ್ಕೂ, ಎಂತಹ ಅಪಾಯಗಳನ್ನು ಎದುರಿಸಲು ಕೂಡ ಹಿಂಜರಿಯುವುದಿಲ್ಲ. ಅಷ್ಟೇ ಅಲ್ಲದೆ ಬೀದಿ ನಾಯಿಗಳೂ ಮನುಷ್ಯನ ಸಹಾಯಕ್ಕೆ ಧಾವಿಸಿದ ಅದೆಷ್ಟೋ ನಿದರ್ಶನಗಳಿವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಕಾಮುಕನೊಬ್ಬನಿಂದ ಅತ್ಯಾಚಾರಕ್ಕೊಳಗಾಗುತ್ತಿದ್ದ ಮಹಿಳೆಯನ್ನು ಬೀದಿ ನಾಯಿಯೊಂದು ಕಾಪಾಡಿದೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಘಟನೆ ಜೂನ್ 30 ರಂದು ಮುಂಬೈನ ವಾಸಯಿಯಲ್ಲಿ ನಡೆದಿದ್ದು, ಇಲ್ಲಿನ ಮಾಣಿಕ್‌ಪುರ ಗಲ್ಲಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 32 ವರ್ಷದ ಮಹಿಳೆಯ ಮೇಲೆ 35 ವರ್ಷ ಸಂದೀಪ್ ಖೋತ್ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ವೃತ್ತಿಯಲ್ಲಿ ಅಕೌಂಟೆಂಟ್ ಆಗಿರುವ ಆ ಮಹಿಳೆ ಮಧ್ಯರಾತ್ರಿ ಸುಮಾರು 1.30 ರ ಹೊತ್ತಿಗೆ ಕೆಲಸದಿಂದ ಬರುತ್ತಿರುವ ಸಂದರ್ಭದಲ್ಲಿ ಆಕೆಯನ್ನು ಹಿಂಬಾಲಿಸುತ್ತಾ ಬಂದ ಸಂದೀಪ್ ನಿನ್ನನ್ನು ಅತ್ಯಾಚಾರ ಮಾಡುವುದಾಗಿ ಬೆದರಿಸಿ, ನಂತರ ಆಕೆಯ ಬಾಯಿಯನ್ನು ಬಿಗಿಯಾಗಿ ಹಿಡಿದು, ಅಕೆಯನ್ನು ನೆಲಕ್ಕೆ ತಳ್ಳಿ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.
ಆ ಸಂದರ್ಭದಲ್ಲಿ ಅಲ್ಲಿಗೆ ಬಂದಂತಹ ಬೀದಿನಾಯಿಯೊಂದು ಕಾಮುಕನ ಮೇಲೆ ಜೋರಾಗಿ ಬೊಗಳಲು ಪ್ರಾರಂಭಿಸುತ್ತದೆ. ಇದರಿಂದ ಆತ ಕಕ್ಕಾಬಿಕ್ಕಿಯಾಗುತ್ತಾನೆ. ಇದರ ಸದುಪಯೋಗವನ್ನು ಪಡೆದುಕೊಂಡ ಮಹಿಳೆ ಆ ತಕ್ಷಣ ಅಲ್ಲಿಂದ ಓಡಿ ಹೋಗಿದ್ದಾರೆ.
ಮಹಿಳೆಯ ದೂರಿನ ಮೇರೆಗೆ ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಆ ಮಹಿಳೆಯನ್ನು ಯಾರೋ ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಈ ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ.