ಸಮಗ್ರ ನ್ಯೂಸ್: ರಾಜ್ಯದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚಿಸಲಾಗಿದ್ದು, ಮುಖ್ಯಮಂತ್ರಿಯವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಸಚಿವೆ ಲಕ್ಷ್ಮಿ ಆರ್.ಹೆಬ್ಬಾಳಕರ್ ಹೇಳಿದರು.
ಯಶೋಧೆಯು ಶ್ರೀಕೃಷ್ಣನನ್ನು ಹೇಗೆ ಬೆಳೆಸುತ್ತಾಳೆಯೋ, ಅದರಂತೆ ಸಮಾಜದಲ್ಲಿನ ಮಕ್ಕಳನ್ನು ಅಂಗವಾಡಿ ಕಾರ್ಯಕರ್ತೆ, ಸಹಾಯಕಿಯರು ಬೆಳೆಸುತ್ತಿದ್ದು, ಸಮಾಜದ ಏಳಿಗೆಗೆ ಇವರ ಪಾತ್ರ ಮಹತ್ವದ್ದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಸಬಲೀಕರಣ ಇಲಾಖೆ ಸಚಿವರಾದ ಲಕ್ಷ್ಮಿ ಆರ್.ಹೆಬ್ಬಾಳಕರ್ ಅವರು ಹೇಳಿದರು.
ಒಂದು ಹೆಣ್ಣು ಮನೆ ಬೆಳಗುತ್ತಾಳೆ ಮತ್ತು ಸಮಾಜವನ್ನು ಬೆಳೆಸುತ್ತಾಳೆ. ಚುನಾವಣೆ, ಪಲ್ಸ್-ಪೆÇಲೀಯೋ, ಮನೆ ಸಮೀಕ್ಷೆ, ಮುಖ್ಯವಾಗಿ ಕೊರೊನಾ ಸಂದರ್ಭದಲ್ಲಿ ಅಂಗವಾಡಿ ಕಾರ್ಯಕರ್ತೆ, ಸಹಾಯಕಿಯರು ಗಣನೀಯ ಸೇವೆ ನೀಡಿದ್ದಾರೆ. ಸಮಾಜದಲ್ಲಿ ಅತ್ಯಂತ ಪ್ರಮುಖ ಸೇವೆ ನೀಡುವ ಇಲಾಖೆ ನಮ್ಮದು ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ರಾಜ್ಯದಲ್ಲಿನ 7 ಸಾವಿರಕ್ಕೂ ಹೆಚ್ಚಿನ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸಲಾಗುವುದು. ಈ ಮೂಲಕ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ನುರಿತರಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಆದ್ಯತೆ ನೀಡಲಾಗುತ್ತದೆ. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ, ತೂಕ, ಆರೋಗ್ಯ ಮತ್ತು ಗುಣಮಟ್ಟ ಶಿಕ್ಷಣಕ್ಕೆ ಪೂರಕವಾಗುತ್ತದೆ ಎಂದು ತಿಳಿಸಿದರು.