ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ಅಲ್ಲದೇ, ಹಲವರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಹತ್ರಾಸ್ ಜಿಲ್ಲೆಯ ಸಿಕಂದರಾ ರಾವು ತಹಸಿಲ್‌ನ ರತಿಭಾನ್‌ಪುರ ಗ್ರಾಮದಲ್ಲಿ ಧಾರ್ಮಿಕ ಬೋಧಕ ಹಾಗೂ ಅವರ ಪತ್ನಿ ಉದ್ದೇಶಿಸಿ ಮಾತನಾಡುತ್ತಿದ್ದ ಸತ್ಸಂಗದ ಕಾರ್ಯಕ್ರಮದಲ್ಲಿ ಈ ಕಾಲ್ತುಳಿತ ಸಂಭವಿಸಿದೆ.
ಈ ನಡುವೆ ಆಸ್ಪತ್ರೆಯಲ್ಲಿ ಹೆಣಗಳ ರಾಶಿ ಕಂಡು ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಟಾಹ್ ಜಿಲ್ಲೆಯ ಅವಘರ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಕಾನ್‌ಸ್ಟೆಬಲ್ ರವಿ, ಹತ್ರಾಸ್ ಸತ್ಸಂಗದಲ್ಲಿ ಮೃತಪಟ್ಟವರ ಮೃತದೇಹಗಳನ್ನು ನೋಡಿದ ನಂತರ ಹೃದಯಾಘಾತಕ್ಕೆ ಒಳಗಾಗಿದ್ದರು.
ತಕ್ಷಣ ಅಧಿಕಾರಿಗಳು ಹವಾನಿಯಂತ್ರಿತ ಕೋಣೆಗೆ ಅವರನ್ನು ಸ್ಥಳಾಂತರಿಸಿದರು. ಆದರೆ, ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಹತ್ರಾಸ್ ಕಾಲ್ತುಳಿತದಿಂದ ಇದುವರೆಗೆ 116 ಮಂದಿ ಬಲಿಯಾಗಿದ್ದಾರೆ. ಅವರ ಪೈಕಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.