ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮತ್ತೊಂದು ಅವಘಡ ಸಂಭವಿಸಿದೆ. ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಭಾರೀ ಮಳೆಗೆ ಮನೆ ಮೇಲೆ ಧರೆ ಕುಸಿದ ಪರಿಣಾಮ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ ಘಟನೆ ಇಂದು(ಗುರುವಾರ) ಬೆಳಗಿನ ಜಾವ ನಡೆದಿದೆ.
ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಸಮೀಪದ ಜೈನರಗುರಿಯಲ್ಲಿ ಘಟನೆ ನಡೆದಿದೆ. ನಸುಕಿನ ಜಾವ ನಿದ್ದೆಯಲ್ಲಿದ್ದ ಸಂದರ್ಭ ಮನೆ ಮೇಲೆ ಧರೆ ಕುಸಿದಿದೆ. ಅದೃಷ್ಟವಶಾತ್ ಮಣ್ಣಿನಡಿ ಸಿಲುಕಿದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೋಡೆ ಕುಸಿದ ಬೆನ್ನಲ್ಲೇ ಇಬ್ಬರು ಮಕ್ಕಳನ್ನ ಮನೆಯವರು ಪಾರು ಮಾಡಿದ್ದಾರೆ. ಮಣ್ಣು ಬಿದ್ದ ಪರಿಣಾಮ ಮನೆಯ ಅರ್ಧ ಭಾಗ ಕುಸಿದು ಹಾನಿ ಉಂಟಾಗಿದೆ. ಮಜೀದ್ ಮತ್ತು ಇಬ್ಬರು ಮಲಗಿದ್ದ ಕೊಠಡಿ ಮೇಲೆ ಮಣ್ಣು ಬಿದ್ದಿತ್ತು.
ತಕ್ಷಣ ಎಚ್ಚೆತ್ತು ಮಣ್ಣಿನಡಿ ಇದ್ದ ಇಬ್ಬರು ಮಕ್ಕಳನ್ನ ತಂದೆ ಮಜೀದ್ ಪಾರು ಮಾಡಿದ್ದಾರೆ. ಮನೆ ಪಕ್ಕದ ಧರೆಯೊಂದು ಸಡಿಲಗೊಂಡು ಮನೆ ಮೇಲೆ ಬಿದ್ದು ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪುತ್ತೂರು ನಗರಸಭಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರಸಭೆ ಮತ್ತು ಸ್ಥಳೀಯರಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಸಿದ್ದಾರೆ.