ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಘಟ್ಟ ಪ್ರದೇಶಗಳಲ್ಲಿ ಕಳೆದ ರಾತ್ರಿಯಿಂದ ಸುರಿದ ನಿರಂತರ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಸ್ನಾನ ಘಟ್ಟ ಮುಳುಗಡೆಯಾಗಿದೆ. ನಿರಂತರ ಮಳೆಗೆ ನದಿಯಲ್ಲಿ ನೀರಿ ಮಟ್ಟ ಏರಿಕೆಯಾಗಿ ಇದೀಗ ಸ್ನಾನ ಘಟ್ಟ ಮುಳುಗಡೆಯಾಗಿದ್ದು, ನದಿಗಿಳಿಯದಂತೆ ಭಕ್ತರಿಗೆ ಸೂಚಿಸಲಾಗಿದೆ.
ಭಕ್ತರು ನದಿ ದಡದಲ್ಲೇ ತೀರ್ಥ ಸ್ನಾನ ಮಾಡುತ್ತಿದ್ದಾರೆ. ಕುಮಾರಧಾರ ಉಪನದಿ ದರ್ಪಣತೀರ್ಥ ಕೂಡ ತುಂಬಿ ಹರಿಯುತ್ತಿದೆ. ಕುಮಾರಧಾರ ನದಿ ತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿಗಳು, ಗೃಹ ರಕ್ಷಕ ದಳ ಸಿಬ್ಬಂದಿಗಳ ನಿಯೋಜಿಸಲಾಗಿದೆ. ಕಳೆದ ರಾತ್ರಿಯಿಂದ ಕುಕ್ಕೆಯಲ್ಲಿ ನಿರಂತರ ಮಳೆಯಾಗುತ್ತಿದೆ.