ಸಮಗ್ರ ನ್ಯೂಸ್: ಹಲವು ದಿನಗಳ ಬಳಿಕ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮತ್ತೆ ಮುಂಗಾರು ಮಳೆ ಆರ್ಭಟಿಸಿದ್ದು, ಭಾರೀ ಗಾಳಿಗೆ ಹಲವೆಡೆ ಮರ ಮತ್ತು ವಿದ್ಯುತ್ ಕಂಬ ಉರುಳಿಬಿದ್ದು, 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮಂಗಳೂರಲ್ಲಿ ಮನೆಯೊಂದರ ಮೇಲೆ ಕಾಂಪೌಂಡ್ ಕುಸಿದು ಒಂದೇ ಕುಟುಂಬದ ನಾಲ್ವರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.
ಇನ್ನು ಗುರುವಾರವೂ ಭಾರೀ ಮಳೆ ನಿರೀಕ್ಷೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗಿನ ವಿರಾಜಪೇಟೆ, ಪೊನ್ನಂಪೇಟೆ ತಾಲೂಕುಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸ ಲಾಗಿದೆ. ಭಾರೀ ಗಾಳಿ ಮಳೆಯಿಂದಾಗಿ ಮೀನುಗಾರರಿಗೂ ಕಡಲಿಗಿಳಿಯದಂತೆ ಜಿಲ್ಲಾಡಳಿತಗಳು ಸೂಚಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡೂರು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೊಡಗಿನಲ್ಲಿ ಕಾವೇರಿ ನದಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಮರಾ ಬಿದ್ದು ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ತುಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಕಳಸ-ಮಂಗಳೂರು ರಾಜ್ಯ ಹೆದ್ದಾರಿಯ ಕುದುರೆಮುಖ ಸಮೀಪದ ನೆಲ್ಲಿಬೀಡು ಗ್ರಾಮದ ಬಳಿ ಮರವೊಂದು ಬಿದ್ದಿದೆ.