ಸಮಗ್ರ ನ್ಯೂಸ್: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಆರ್ಥಿಕ ಕ್ರೋಡೀಕರಣವೇ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಒಂದೊಂದೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ‘ಗ್ಯಾರಂಟಿ’ ಸರ್ಕಾರ ಬೆಲೆಏರಿಕೆ ಪಕ್ಕಾ ಮಾಡ್ತಿದೆ.
ಕಳೆದ ವಾರವಷ್ಟೇ ಪೆಟ್ರೋಲ್, ಡೀಸೆಲ್ ದರವನ್ನು ಸರಿಸುಮಾರು ₹3ರಷ್ಟು ಏರಿಕೆ ಮಾಡಿದ್ದು, ನಿನ್ನೆ ಹಾಲಿನ ದರದಲ್ಲಿ ₹2 ಏರಿಕೆಯಾಗಿದೆ. ಜಾಸ್ತಿ ಹಾಲು ನೀಡಿ ಜಾಸ್ತಿ ಬೆಲೆ ಮಾಡಿದ್ದೇವೆ ಎಂದು ಸಮಜಾಯಿಷಿ ನೀಡಿದರೂ ಗ್ರಾಹಕರ ಮೇಲೆ ಹೊರೆ ಹೊರಿಸಿದ್ದಂತೂ ಸತ್ಯ.
ಇನ್ನು ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ಸಾರಿಗೆ ಇಲಾಖೆ ಮನವಿ ಮಾಡುತ್ತಿದ್ದರೂ ಸದ್ಯಕ್ಕೆ ಬಸ್ ಪ್ರಯಾಣ ದರ ಏರಿಸುವ ಮಾತಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಅದಾಗ್ಯೂ ಬಸ್ ಪ್ರಯಾಣದರ ಏರಿಕೆಯಾದರೆ ಆಶ್ಚರ್ಯವಿಲ್ಲ. ಶೇ15 ರಿಂದ 20ರಷ್ಟು ಟಿಕೆಟ್ ದರ ಏರಿಸುವ ಸಾಧ್ಯತೆ ಅಂತೂ ತಳ್ಳಿಹಾಕುವಂತಿಲ್ಲ.
ಪೆಟ್ರೋಲ್ ದರ ಹೆಚ್ಚಾದ ಬೆನ್ನಲ್ಲೇ ಆಟೋ ಚಾಲಕರ ಸಂಘ ನಿಗದಿತ ದರವನ್ನು ಹೆಚ್ಚಿಸಲು ಸರ್ಕಾರಕ್ಕೆ ಒತ್ತಾಯಿಸುತ್ತಿವೆ. ಈಗಾಗಲೇ ಬಿಡಿಭಾಗಗಳು ಹಾಗೂ ನಿರ್ವಹಣೆ ಜೊತೆಗೆ ಪೆಟ್ರೋಲ್ ದರ ಏರಿಕೆ ಮಾಡಿರುವುದರಿಂದ ಆರ್ಥಿಕ ಹೊಡೆತ ಉಂಟಾಗಿದ್ದು, ದರ ಏರಿಕೆ ಅನಿವಾರ್ಯ ಎಂಬುದು ಆಟೋ ಸಂಘಟನೆಗಳ ಹೇಳಿಕೆ.
ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೊಟೇಲ್ ಮಾಲೀಕರು ಆಹಾರದ ಬೆಲೆ ಏರಿಕೆ ಮಾಡಲು ತೀರ್ಮಾನಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಗ್ಯಾಸ್ ದರ ಏರಿಕೆ ಮುಂತಾದ ಸಮಸ್ಯೆಗಳನ್ನು ಮುಂದಿರಿಸಿಕೊಂಡು ಬೆಲೆ ಏರಿಕೆ ಮಾಡಲು ತೀರ್ಮಾನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಹಲವು ಅಗತ್ಯ ಸೇವೆ ಹಾಗೂ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಒಂದು ಕಡೆ ಉಚಿತ ಗ್ಯಾರಂಟಿ ನೀಡಿ ಮತ್ತೊಂದು ಕಡೆ ಆರ್ಥಿಕ ಕ್ರೋಡಿಕರಣಕ್ಕೆ ಜನಸಾಮಾನ್ಯರ ಕಿಸೆಗೆ ಕತ್ತರಿ ಹಾಕುತ್ತಿದೆ. ಛಾಪಾಕಾಗದ, ಆಸ್ತಿ ಪರಭಾರೆ ಮತ್ತು ನೋಂದಣಿ, ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಕೆಗಳ ದರ ಗಣನೀಯವಾಗಿ ಏರಿಕೆ ಕಂಡಿದೆ. ಇನ್ನೊಂದೆಡೆ ಕಿಸಾನ್ ಸಮ್ಮಾನ್(ರಾಜ್ಯದ ಅನುದಾನ), ವಿದ್ಯಾರ್ಥಿ ವೇತನ, ಹಾಲಿನ ಪ್ರೋತ್ಸಾಹಧನ ಸೇರಿದಂತೆ ಹಲವು ಸೌಲಭ್ಯಗಳು ಮಾಯವಾಗಿವೆ. ಕಿಂಚಿತ್ತು ಕೊಟ್ಟು ಭಾರೀ ಮೊತ್ತವನ್ನು ನಾಡಿದ ಜನತೆಯಿಂದ ಲೂಟಿ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರದ ಗ್ಯಾರಂಟಿ ಹೊಂದಾಣಿಕೆಗೆ ಜನ ಸಾಮಾನ್ಯರಿಗೆ ಆರ್ಥಿಕ ಹೊರೆ ಗ್ಯಾರಂಟಿಯಾಗುತ್ತಿದೆ. ಉಚಿತ ಕೊಡುಗೆಗಳನ್ನು ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಮಾತ್ರವೇ ನೀಡಿದಲ್ಲಿ ಈ ಹೊರೆ ಕಡಿಮೆಯಾಗಬಹುದೇನೋ…