ಸಮಗ್ರ ನ್ಯೂಸ್: ಮುಂದಿನ 3 ದಿನಗಳಲ್ಲಿ ಅಸುರಕ್ಷಿತ ಮಸಾಲಪೂರಿ ಹಾಗೂ ಪಾನಿಪೂರಿ ಮಾರಾಟವನ್ನು ರಾಜ್ಯಾದ್ಯಂತ ನಿಷೇಧ ಮಾಡಲಾಗುತ್ತದೆಯೇ? ಅಂಥದ್ದೊಂದು ತೂಗುಕತ್ತಿ ಈ ಮಸಾಲಾ ತಿಂಡಿಗಳ ಮೇಲಿದೆ. ಇದಕ್ಕೆ ಬಳಸುವ ಕೆಮಿಕಲ್ ಸಾಸ್ ಮಕ್ಕಳ ಜೀರ್ಣಾಂಗದ ಮೇಲೂ ಪರಿಣಾಮ ಬೀರಿ, ಹೈಪರ್ ಆಕ್ವಿವ್‌ನೆಸ್ ಗೆ ಕಾರಣವಾಗುತ್ತಿದೆ ಎಂಬ ಅಂಶ ಗೊತ್ತಾಗಿದೆ.
ರಾಜ್ಯದಲ್ಲಿ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಅಸುರಕ್ಷಿತ ಗೋಬಿ ಹಾಗೂ ಕಾಟನ್ ಕ್ಯಾಂಡಿಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಜೂ. 24ರಂದು ಕೃತಕ ಬಣ್ಣ ಬೆರೆಸಿ ಮಾಡುವ ವೆಜ್, ಫಿಶ್, ಚಿಕನ್ ಕಬಾಬ್ ಅನ್ನು ನಿಷೇಧಿಸಿದ ಬೆನ್ನಲ್ಲೇ ಅಸುರಕ್ಷಿತ ಪಾನಿಪೂರಿ ಹಾಗೂ ಮಸಾಲಪೂರಿ ನಿರ್ಬಂಧಕ್ಕೆ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಇಲಾಖೆ ಸಿದ್ಧವಾಗಿದೆ.
18 ಮಾದರಿ ಅಸುರಕ್ಷಿತ!
ಆಹಾರ ಮತ್ತು ಸುರಕ್ಷತಾ ಗುಣಮಟ್ಟ ಇಲಾಖೆಯು ರಾಜ್ಯಾದ್ಯಂತ 78 ಪಾನಿಪೂರಿ ಹಾಗೂ ಮಸಾಲ ಪೂರಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವುಗಳಲ್ಲಿ 18 ಮಾದರಿಗಳು ಮನುಷ್ಯರು ಸೇವಿಸಲು ಅಸುರಕ್ಷಿತ ಎನ್ನುವುದು ದೃಢವಾಗಿದೆ.
ಆರೋಗ್ಯಕ್ಕೆ ಹಾನಿಕರ
ಯಾವುದೇ ಆಹಾರದ ಬಣ್ಣ ಹಾಗೂ ರುಚಿ ಹೆಚ್ಚಿಸಲು ಬಳಸುವ ಕೃತಕ ಬಣ್ಣ ಹಾಗೂ ಟೇಸ್ಟಿಂಗ್ ಪುಡಿಗಳ ಮಿಶ್ರಣ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವಿಶೇಷವಾಗಿ ಕೃತಕ ಬಣ್ಣಕ್ಕೆ ಬಳಕೆಯಾಗುವ “ಸನ್‌ಸೆಟ್ ಯಲ್ಲೋ’ ಅಂಶವು ಚಿಕ್ಕ ಮಕ್ಕಳ ಜೀರ್ಣಾಂಗದ ಮೇಲೆ ಪರಿಣಾಮ ಬೀರಿ, ಹೈಪರ್ ಆ್ಯಕ್ವಿವ್‌ನೆಸ್Õಗೆ ಕಾರಣವಾಗುತ್ತದೆ. ದೊಡ್ಡವರ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ.
ಪಾನಿಪೂರಿ ಹಾಗೂ ಮಸಾಲಪೂರಿಯಲ್ಲಿ ರುಚಿ ಹೆಚ್ಚಿಸುವ ಖಟ್ಟಾ-ಮೀಠಾ ಸಾಸ್‌ನಲ್ಲಿ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕ ವರದಿಯಾಗಿದೆ. ಇದರಲ್ಲಿ ಕೃತಕ ಬಣ್ಣ ಬಳಕೆಯಾಗುತ್ತಿದೆ. ಇದರ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಪೂರಿಯ ಮಾದರಿಗಳನ್ನು ಮೈಕ್ರೋ ಬ್ಯಾಕ್ಟೀರಿಯಾ ಪರೀಕ್ಷೆಗೆ ಒಳಪಡಿಸಿದ್ದು, ಯಾವುದೇ ಬ್ಯಾಕ್ಟೀರಿಯಾ ಪತ್ತೆಯಾಗಿಲ್ಲ. ಪೂರಿ ಹಾಗೂ ಪಾನಿಗೆ ಸಂಬಂಧಿಸಿದ ಕೆಲವು ಪರೀಕ್ಷೆ ವರದಿಗಳು ಕೈ ಸೇರಬೇಕಿವೆ ಎಂದು ಮೂಲಗಳು ದೃಢಪಡಿಸಿವೆ.
ರಾಜ್ಯಾದ್ಯಂತ ಪಾನಿಪೂರಿ ಹಾಗೂ ಮಸಾಲ ಪೂರಿ, ಗೋಲ್‌ಗೊಪ್ಪಾದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕೆಲವು ಮಾದರಿಗಳು ಸೇವನೆಗೆ ಅಸುರಕ್ಷಿತ ಎಂದು ದೃಢಪಟ್ಟಿದೆ. ಕೆಲವು ವರದಿಗಳು ಇನ್ನಷ್ಟೇ ಕೈ ಸೇರಬೇಕಿವೆ. ಬಳಿಕ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.