ಸಮಗ್ರ ನ್ಯೂಸ್: ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಎಚ್‌ಡಿ ರೇವಣ್ಣ ಹಿರಿಯ ಪುತ್ರ ಸೂರಜ್ ರೇವಣ್ಣ ವಿರುದ್ಧ ಕೇಳಿಬಂದಿರುವ ಸಲಿಂಗ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೆಶಕರ ಕಚೇರಿಯಿಂದ ಆದೇಶ ಹೊರಡಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್ ಹಿತೇಂದ್ರ ಅವರು, ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಕ್ರೈಮ್ ನಂಬರ್ 92/2024 ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದ್ದು, ಈ ಕೂಡಲೇ ಮುಂದಿನ ತನಿಖೆಗಾಗಿ ಖುದ್ದು ಸಿಐಡಿ ಕಚೇಇಗೆ ತೆರಳಿ ಕೇಸ್ ಫೈಲ್ ಅನ್ನು ಸಿಐಡಿಗೆ ಹ್ಯಾಂಡ್ ಓವರ್ ಮಾಡುವಂತೆ ಹಾಸನ ಜಿಲ್ಲಾ ಎಸ್‌ಪಿಗೆ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಸ್ ಫೈಲ್ ಹಾಗೂ ಆರೋಪಿ ಸಮೇತ ಹೊಳೆನರಸೀಪುರ ಪೊಲೀಸರು ಮಧ್ಯಾಹ್ನದ ನಂತರ ಬೆಂಗಳೂರಿಗೆ ಬರಲಿದ್ದಾರೆ.
ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ವಿಧಾನಪರಿಷತ್ ಸದಸ್ಯ, ಮಾಜಿ ಸಚಿವ ಎಚ್‌ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷೆನ್ 377,342,506 ಅಡಿ ಪ್ರಕರಣ ದಾಖಲಾಗಿದೆ. ಜಾಮೀನು ರಹಿತ ಕೇಸ್ ಹಿನ್ನೆಲೆಯಲ್ಲಿ ನಿನ್ನೆ (ಜೂನ್ 22 ಶನಿವಾರ) ರಾತ್ರಿ ಸುದೀರ್ಘ ವಿಚಾರಣೆ ನಡೆಸಿದ್ದ ಪೊಲೀಸರು ಬಳಿಕ ಸೂರಜ್‌ನನ್ನು ಅರೆಸ್ಟ್ ಮಾಡಿದ್ದಾರೆ.
ಹಾಸನ ಸೆನ್ ಪೊಲೀಸ್ ಠಾಣೆಯಲ್ಲಿಯೇ ಡಾ.ಸೂರಜ್‌ರೇವಣ್ಣನನ್ನು ಪೊಲೀಸರು ರಾತ್ರಿ ಬಂಧಿಸಿದ್ದು, ನಿನ್ನೆ ಬೆಳಗಿನ ಜಾವ 4 ಗಂಟೆ ವರೆಗೂ ವಿಚಾರಣೆ ನಡೆಸಿರುವ ಪೊಲೀಸರು ನಂತರ ಬಂಧನ ಮಾಡಿದ್ದಾರೆ. ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಹಿರಿಯ ಪುತ್ರ ಆಗಿರುವ ಎಂಎಲ್ ಸಿ ಸೂರಜ್ ರೇವಣ್ಣ ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳು, ಮೊಬೈಲ್ ಕಾಲ್ ಸೇರಿದಂತೆ ಇನ್ನಿತರೆ ದಾಖಲೆಗಳ ಸಹಿತ ಜೆಡಿಎಸ್ ಕಾರ್ಯಕರ್ತನಾಗಿರುವ ಸಂತ್ರಸ್ತನ ವಿರುದ್ಧ ದೂರು ನೀಡಲು ಬಂದಾಗ ಪೊಲೀಸ್ ಠಾಣೆಯಲ್ಲೇ ಬಂಧನ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.