ಸಮಗ್ರ ನ್ಯೂಸ್: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಹೋದರ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಯುವಕನ ವಿರುದ್ಧವೇ ಹಾಸನ ಜಿಲ್ಲೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೂರಜ್ ಬ್ರಿಗೇಡ್‌ನ ಖಜಾಂಜಿ ಶಿವಕುಮಾರ್ ಹೆಚ್.ಎಲ್ ಎಂಬವರು ದೂರು ನೀಡಿದ್ದು “ಯುವಕ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ಸೂರಜ್ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಮಾಡುವುದಾಗಿ ಬೆದರಿಕೆ ಹಾಕಿದ್ದ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
“ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಆತ ನನಗೆ ಪರಿಚಯವಾಗಿದ್ದ. ನಾನು ಸೂರಜ್ ಬ್ರಿಗೇಡ್ ಖಜಾಂಚಿ ಆಗಿರುವುದರಿಂದ ಸೂರಜ್ ಅವರನ್ನು ಭೇಟಿ ಮಾಡಿಸುವಂತೆ ಕೇಳಿದ್ದ. ಅದರಂತೆ ಜೂನ್ 16ರಂದು ಅವರು ಚನ್ನರಾಯಪಟ್ಟಣ ತಾಲೂಕಿನ ಗನ್ನಕಡದ ತೋಟದ ಮನೆಯಲ್ಲಿ ಸಿಗುತ್ತಾರೆ ಎಂದು ತಿಳಿಸಿದ್ದೆ” ಎಂದು ಶಿವಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಅಂದು ಸೂರಜ್ ಅವರನ್ನು ಭೇಟಿ ಮಾಡಿದ್ದೆ. ಕೆಲಸ ಕೊಡಿಸಿ ಎಂದು ಕೇಳಿದ್ದೆ. ಅವರು ಈಗ ಸಾಧ್ಯವಿಲ್ಲ ಮುಂದೆ ನೋಡೋಣ ಎಂದಿದ್ದಾರೆ ಎಂದು ಆ ವ್ಯಕ್ತಿ ತಿಳಿಸಿದ್ದ. ಈಗ ನೀನೂ ಸಹಾಯ ಮಾಡಿದ್ದರೆ, ಸೂರಜ್ ರೇವಣ್ಣ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಮಾಡುವುದಾಗಿ ಬೆದರಿಕೆ ಹಾಕಿದ್ದ” ಎಂದು ಶಿವಕುಮಾರ್ ದೂರಿನಲ್ಲಿ ವಿವರಿಸಿದ್ದಾರೆ.
“ಈ ವಿಚಾರವನ್ನು ನಾನು ಸೂರಜ್ ಅವರಿಗೆ ತಿಳಿಸಿದೆ. ಆತ ಕೆಲಸ ಕೇಳಿಕೊಂಡು ಮನೆಗೆ ಬಂದಾಗ ಭದ್ರತೆಯ ಪೊಲೀಸರು ಸೇರಿ ಹಲವಾರು ಜನರು ಇದ್ದರು. ನಾನೇನು ತಪ್ಪು ಮಾಡಿಲ್ಲ. ಯಾಕೆ ಹಣ ಕೊಡಬೇಕು? ಎಂದು ಸೂರಜ್ ರೇವಣ್ಣ ಕೇಳಿದ್ದರು”
“ಜೂನ್ 18ರಂದು ಹಾಸನದ ಜಿಲ್ಲಾಸ್ಪತ್ರೆಗೆ ತೆರಳಿ ಆಸ್ಪತ್ರೆ ಚೀಟಿಗೆ ಎಂಎಲ್‌ಸಿ ಸೀಲ್ ಹಾಕಿಸಿ ಫೋಟೋ ಹಾಕಿ ಬೆದರಿಕೆ ಹಾಕಿದ್ದಾನೆ. ಮೆಡಿಕಲ್ ಲೀಗಲ್ ಕೇಸ್ ಸೀಲ್ ಇರುವ ಅಸ್ಪತ್ರೆ ಚೀಟಿ ತೋರಿಸಿ ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಐದು ಕೋಟಿ ಬಳಿಕ ಮೂರು ಕೋಟಿ, ಕಡೆಗೆ ಎರಡೂವರೆ ಕೋಟಿಯಾದ್ರೂ ಹಣ ಕೊಡಿಸು ಎಂದಿದ್ದ”.
“ಹಣ ಕೊಡಿಸದಿದ್ದರೆ ದೊಡ್ಡ ಕುಟುಂಬದ ಮರ್ಯಾದೆ ಕಳೆಯುತ್ತೇನೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ. ನಿಮ್ಮ ಬಾಸ್ ಹಣ ಕೊಡದಿದ್ದರೆ ದೊಡ್ಡ ದೊಡ್ಡವರು ಹಣ ಕೊಡಲು ರೆಡಿ ಇದ್ದಾರೆ. ನಾನು ಬೆಂಗಳೂರಿಗೆ ಹೋಗಿ ಸುದ್ದಿಗೋಷ್ಠಿ ಮಾಡುತ್ತೇನೆ. ಸೂರಜ್ ರೇವಣ್ಣ ಗೌರವ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.