ಸಮಗ್ರ ನ್ಯೂಸ್: ಜೂನ್, 27 ರಿಂದ ಜುಲೈ, 02 ರವರೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಅಗ್ನಿವೀರ್ ಸೇನಾ ನೇಮಕಾತಿ ರ್‍ಯಾಲಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೈನಿಕ ಕಲ್ಯಾಣ ಇಲಾಖೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ್ಯಾಲಿಯು ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಯಾರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು. ವಸತಿ ಊಟೋಪಚಾರ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದರು.
ಸೈನಿಕ ಭರ್ತಿ ಕಾರ್ಯಾಲಯದ ನಿರ್ದೇಶಕರಾದ ಕರ್ನಲ್ ಗೌರವ್ ತಾಪ ಅವರು ಮಾತನಾಡಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕಿದೆ. ಲೋಕೋಪಯೋಗಿ, ಸೆಸ್ಕ್, ಪದವಿ ಪೂರ್ವ ಶಿಕ್ಷಣ, ಅಗ್ನಿಶಾಮಕ ದಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವೈದ್ಯಕೀಯ ಶಿಕ್ಷಣ, ಸೆಸ್ಕ್, ಬಿಎಸ್‍ಎನ್‍ಎಲ್ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಸಹಕಾರ ನೀಡುವಂತೆ ನಿರ್ದೇಶನ ನೀಡಿದರು.
ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ನೋಡಲ್ ಅಧಿಕಾರಿ ಮೇಜರ್ ಬಾಲಸುಬ್ರಹ್ಮಣ್ಯಂ ಅವರು ಅಗ್ನಿವೀರ್ ಸೇನಾ ನೇಮಕಾತಿ ರ್‍ಯಾಲಿ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಲೋಕೋಪಯೋಗಿ ಇಲಾಖೆಯ ಇಇ ಸಿದ್ದೇಗೌಡ, ನಗರಸಭೆ ಪೌರಾಯುಕ್ತ ವಿಜಯ್, ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜಾ ಆಚಾರ್, ಸೆಸ್ಕ್ ಕಾರ್ಯಪಾಲಕ ಅಭಿಯಂತ ಅನಿತಾ ಬಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ.ವಿಸ್ಮಯಿ, ಭಾರತೀಯ ದೂರ ಸಂಚಾರ ನಿಗಮದ ವ್ಯವಸ್ಥಾಪಕ ಪ್ರದೀಪ್ ಉಪಸ್ಥಿತರಿದ್ದರು.