ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಚುರುಕಾಗಲಿದ್ದು, ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯಿದೆ ಎಂಬ ಮಾಹಿತಿ ಇಲ್ಲಿದೆ. ಜೂನ್ 23 ರಿಂದ ಮಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಈ ದಿನಗಳಲ್ಲಿ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆ ಸಿಕ್ಕಿದೆ.
ಶನಿವಾರದಿಂದ (ಜೂ.22) ಆರಿದ್ರಾ ಮಳೆ ಅಡಿಯಿರಿಸಲಿದೆ. ಈ ದಿನದಿಂದಲೇ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರ ಅತಿ ಭಾರೀ ಮಳೆಯಾಗುವ ಕಾರಣ ರೆಡ್ ಅಲರ್ಟ್ ನೀಡಲಾಗಿದೆ. ಇದೇ ರೀತಿ ಮಲೆನಾಡಿನ ನಾಲ್ಕೂ ಜಿಲ್ಲೆಗಳಲ್ಲಿ ಭಾನುವಾರ ಹಾಗೂ ಸೋಮವಾರ ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಕೊಡಲಾಗಿದೆ. ಇದೇ ಅವಧಿಯಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ವರ್ಷಧಾರೆಯಾಗಿ ಇಡೀ ರಾಜ್ಯವನ್ನು ಆವರಿಸಿಕೊಳ್ಳಲಿದೆ.