ಸಮಗ್ರ ನ್ಯೂಸ್: ಈ ವರ್ಷದ ಹಜ್ ಯಾತ್ರೆಯ ಸಂದರ್ಭದಲ್ಲಿ ಸುಡು ಬಿಸಿಲ ಬೇಗೆಗೆ 550ಕ್ಕೂ ಹೆಚ್ಚು ಹಜ್ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ರಾಜತಾಂತ್ರಿಕ ಅಧಿಕಾರಿಗಳು ಪ್ರಕಟಿಸಿದ್ದಾರೆ.
ಮೃತಪಟ್ಟವರಲ್ಲಿ ಕನಿಷ್ಠ 323 ಮಂದಿ ಈಜಿಪ್ಟ್ ದೇಶದವರಾಗಿದ್ದಾರೆ. ಬಹುತೇಕ ಮಂದಿ ಉಷ್ಣ ಸಂಬಂಧಿ ಅಸ್ವಸ್ಥತೆಗಳಿಗೆ ಬಲಿಯಾಗಿದ್ದಾರೆ ಎಂದು ಈ ಬಗ್ಗೆ ಸಮನ್ವಯ ಮಾಡುತ್ತಿರುವ ಎರಡು ಅರಬ್ ದೇಶಗಳ ರಾಜತಾಂತ್ರಿಕರು ಹೇಳಿದ್ದಾರೆ.
ಕನಿಷ್ಠ 60 ಮಂದಿ ಜೋರ್ಡಾನ್ನರು ಕೂಡಾ ಮೃತಪಟ್ಟಿದ್ದಾರೆ ಎಂದು ರಾಜತಾಂತ್ರಿಕರು ತಿಳಿಸಿದ್ದು, ಜೋರ್ಡಾನ್ ರಾಜಧಾನಿ ಅಮ್ಮನ್ ನಿಂದ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಮೃತಪಟ್ಟವರ ಸಂಖ್ಯೆ 41. ವಿವಿಧ ದೇಶಗಳಿಗೆ ಸೇರಿದ ಒಟ್ಟು 577 ಮಂದಿ ಮೃತಪಟ್ಟಿದ್ದಾರೆ ಎಂದು ಎಎಫ್ ಪಿ ವರದಿ ಮಾಡಿದೆ.
ಹವಾಮಾನ ಬದಲಾವಣೆಯಿಂದ ಯಾತ್ರಾರ್ಥಿಗಳು ತೀವ್ರ ಪರಿಣಾಮ ಎದುರಿಸುತ್ತಿದ್ದಾರೆ ಎಂದು ಕಳೆದ ತಿಂಗಳು ಸೌದಿಯಲ್ಲಿ ನಡೆಸಿದ ಅಧ್ಯಯನದ ವರದಿಯೊಂದು ಹೇಳಿದೆ.
ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಸ್ಥಳದಲ್ಲಿ 0.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿದೆ. ಮಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ಸೋಮವಾರ ತಾಪಮಾನ 51.8 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ಸ್ಪಷ್ಟಪಡಿಸಿದೆ.