ಸಮಗ್ರ ನ್ಯೂಸ್: ಸೀನಿಯರ್ ಚೇಂಬರ್ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಲಿಜನ್ ನಿಂದ ನಡೆಸಲ್ಪಟ್ಟ ಕುಮಾರಧಾರ ಸ್ನಾನಘಟ್ಟ ಸ್ವಚ್ಚತಾ ಕಾರ್ಯದ ವೇಳೆ ಲೋಡುಗಟ್ಟಲೆ ಬಟ್ಟೆ ಹಾಗೂ ಕಸದ ರಾಶಿ ಸಿಕ್ಕಿದೆ.
ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ನದಿ ಸ್ನಾನಘಟ್ಟದಲ್ಲಿ ಬಟ್ಟೆ ಬರೆಗಳು ನದಿಯಲ್ಲಿ ಬಿದ್ದಿದ್ದು ಇಡೀ ನದಿಯ ನೀರು ಮಲಿನಗೊಂಡಿತ್ತು. ಅಲ್ಲದೇ ಹರಿಯುತ್ತಿರುವ ನದಿಯಲ್ಲೂ ವಸ್ತ್ರಗಳು ತೇಲಿಕೊಂಡು ಬಂದು ಇಕ್ಕೆಲಗಳಲ್ಲಿ ಶೇಖರಣೆಗೊಂಡಿತ್ತು.

ಇದರ ತೆರವಿಗಾಗಿ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಜೂ.16ರಂದು ಸ್ವಚ್ಛತಾ ಕಾರ್ಯಕ್ಕೆ ತೊಡಗಿದರು.
ನದಿಯಲ್ಲಿ ಬಿದ್ದಿದ್ದ ಸಾವಿರಾರು ಬಟ್ಟೆಗಳನ್ನು ಮೇಲಕ್ಕೆ ತಂದ ಸ್ವಯಂಸೇವಕರು ಟ್ರ್ಯಾಕ್ಟರ್ ನಲ್ಲಿ ಅದನ್ನು ತುಂಬಿಸಿ ಕೊಂಡೊಯ್ದರು. ಭಕ್ತಾದಿಗಳ ತೀರ್ಥಸ್ನಾನದ ಸಂದರ್ಭದಲ್ಲಿ ದೇವಳದ ವತಿಯಿಂದ ಪ್ರತಿವರ್ಧಕದ ಮೂಲಕ ಎಷ್ಟೇ ಎಚ್ಚರಿಕೆ ನೀಡಿದರು ಮತ್ತೆ ಅದೇ ಚಾಳಿಯನ್ನು ಭಕ್ತಾದಿಗಳು ಮಾಡುತ್ತಿರುವುದು ವಿಷಾದ. ಈ ನಿಟ್ಟಿನಲ್ಲಿ ಶ್ರೀ ದೇವಳದ ವತಿಯಿಂದ ಕಠಿಣ ಕ್ರಮವನ್ನು ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಸಾರ್ವಜನಿಕರು ತಿಳಿಯಪಡಿಸಿರುತ್ತಾರೆ.
ಸ್ವಚ್ಛತಾ ಕಾರ್ಯಕ್ರಮದಲ್ಲಿ ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ನ ಸಂಸ್ಥಾಪಕರು ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲೀಜನ್ನ ಅಧ್ಯಕ್ಷ ಡಾ. ರವಿ ಕಕ್ಕೆ ಪದವು, ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ನಡುತೋಟ, ಸಮಾಜ ಸೇವಾ ಟ್ರಸ್ಟ್ ನ ಸದಸ್ಯರುಗಳು ಭಾಗವಹಿಸಿದ್ದರು.