ಸಮಗ್ರ ನ್ಯೂಸ್: ಸುಳ್ಯ ಸಮೀಪದ ಕಾಂತಮಂಗಲ ಸರಕಾರಿ ಶಾಲೆಯ ಆವರಣದಲ್ಲಿ ನಡೆದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಆರೋಪಿಯನ್ನು ಎಡಮಂಗಲ ಮೂಲದ ಉದಯ್ ಕುಮಾರ್ ನಾಯ್ಕ್ ಎಂದು ಗುರುತಿಸಲಾಗಿದೆ. ಈತ ಕೇವಲ 800 ರೂಪಾಯಿಗಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕೊಲೆಯಾದ ವಸಂತ ಹಾಗೂ ಆರೋಪಿ ಉದಯ್ ಅವರಿಗೆ ಸುಳ್ಯದ ಬಾರೊಂದರಲ್ಲಿ ಪರಿಚಯ ಆಗಿತ್ತು. ಇಬ್ಬರೂ ಮದ್ಯ ಸೇವಿಸಿದ್ದರು. ಬಳಿಕ ಅಂದಿನ ರಾತ್ರಿ ಜತಗೇ ಕಳೆಯುವ ಬಗ್ಗೆ ಮಾತನಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿ ಉದಯ್ ತನಗೆ ಮೊದಲೇ ತಿಳಿದಿರುವಂತಹ ಸ್ಥಳ ಕಾಂತಮಂಗಲ ಸರ್ಕಾರಿ ಶಾಲೆಯ ಬಳಿ ಹೋಗಲು ತೀರ್ಮಾನಿಸಿ ಅಲ್ಲಿಗೆ ಹೊರಡುವ ಸಂದರ್ಭ ಮತ್ತೆ ಮದ್ಯವನ್ನು ಖರೀದಿಸಿ ಆಟೋರಿಕ್ಷಾದಲ್ಲಿ ತೆರಳಿದ್ದರು. ಆಟೋದಿಂದ ಇಳಿಯುವ ಸಂದರ್ಭ ಆಟೋ ಬಾಡಿಗೆ ಹಣವನ್ನು ನೀಡಲು ವಸಂತ ಮುಂದಾದಾಗ ಅವನ ಜೇಬಿನಿಂದ ಕೆಲವು ನೋಟುಗಳು ರಸ್ತೆಗೆ ಬಿದ್ದಿತ್ತು. ಇದನ್ನು ಆರೋಪಿ ಉದಯ್ ಗಮನಿಸಿದ್ದ. ಶಾಲಾ ವರಾಂಡದಲ್ಲಿ ಇಬ್ಬರೂ ಮದ್ಯ ಸೇವಿಸಿ ಮಲಗಿದ್ದು ರಾತ್ರಿ ಸುಮಾರು 12 ಗಂಟೆಯ ಸಮಯಕ್ಕೆ ಉದಯ್ ವಸಂತನ ಜೇಬಿನಲ್ಲಿ ಕಂಡಿದ್ದ ಹಣ ಮತ್ತು ಆತನ ಬಳಿ ಇದ್ದ ಮೊಬೈಲ್ ಫೋನನ್ನು ಲಪಟಾಯಿಸುವ ಉದ್ದೇಶದಿಂದ, ಶರ್ಟ್ ಎಳೆದಿದ್ದಾನೆ.
ಎಚ್ಚರಗೊಂಡ ವಸಂತ ಇದನ್ನು ಪ್ರಶ್ನಿಸಿದ್ದು, ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ವಸಂತ ಉದಯ್ ಗೆ ಹೊಡೆದಿದ್ದು, ಕುಡಿತದ ನಶೆಯಲ್ಲಿ ಮೇಲೇಳಲು ಆಗದೇ ಅಲ್ಲೇ ನಿದ್ರೆ ಮಾಡಿದ್ದಾನೆ. ಇದರಿಂದ ಕುಪಿತಗೊಂಡ ಆರೋಪಿ ಉದಯ್ ಸ್ವಲ್ಪ ದೂರ ಹೋಗಿ ಕೆಂಪು ಕಲ್ಲನ್ನು ತಂದು ವಸಂತ ತಲೆಯ ಮೇಲೆ ಹಾಕಿ ಕೊಲೆ ಮಾಡಿದ್ದಾನೆ. ಮುಂಜಾನೆಯವರಿಗೆ ಅಲ್ಲಿದ್ದು ಬಳಿಕ ಪರಾರಿಯಾಗಿದ್ದಾನೆ. ಅಲ್ಲಿಂದ ಸುಳ್ಯಕ್ಕೆ ಬಂದ ಆರೋಪಿ ಉದಯ್ ತಾನು ಕದ್ದು ತಂದಿದ್ದ ಹಣದಲ್ಲಿ ಮತ್ತೆ ಬಾರ್‌ಗೆ ತೆರಳಿ ಕುಡಿದು ತಿರುಗಾಡುತ್ತಿದ್ದ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ಫುಟೆಜ್, ಸ್ಥಳದಲ್ಲಿ ದೊರೆತ ಮದ್ಯದ ಪಾಕೇಟ್ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.