ಸಮಗ್ರ ನ್ಯೂಸ್: ವಿಜಯೋತ್ಸವ ಹೆಸರಿನಲ್ಲಿ ಇತ್ತೀಚಿಗೆ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಉಳ್ಳಾಲ ತಾಲೂಕಿನ ಬೋಳಿಯಾರ್ ಮಸೀದಿಯ ಮುಂಭಾಗದಲ್ಲಿ ಅಕ್ರಮ ಕೂಟ ಕಟ್ಟಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಪರಿಣಾಮ ಉಂಟಾದ ಅಹಿತಕರ ಘಟನೆಯ ಹೆಸರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಹಲವಾರು ಮಂದಿ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ನೆಪದಲ್ಲಿ ಮನೆಗಳಿಗೆ ದಾಳಿ ನಡೆಸಿದ ಪೊಲೀಸರು ಹಲವಾರು ಯುವಕರನ್ನು, ಮಹಿಳೆಯರನ್ನು ಠಾಣೆಗೆ ಕರೆದೊಯ್ದು ಎರಡು, ಮೂರು ದಿನಗಳ ಕಾಲ ಠಾಣೆಯಲ್ಲಿ ಕೂಡಿಹಾಕಿ ಮಾನಸಿಕ ಹಿಂಸೆ ನೀಡಿದ್ದಾರೆ.
ಈ ಘಟನೆಗಳಿಂದ ಭಯಭೀತರಾಗಿದ್ದ ಹಲವಾರು ಕುಟುಂಬಗಳನ್ನು SDPI ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಎಸ್‌ಡಿಪಿಐ ಅಭ್ಯರ್ಥಿ ರಿಯಾಜ್ ಫರಂಗಿಪೇಟೆ ಮತ್ತು ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ರವರ ನೇತೃತ್ವದ ನಿಯೋಗ ಇಂದು ಭೇಟಿಯಾಗಿ ಸಾಂತ್ವನ ನೀಡಿ ಧೈರ್ಯ ತುಂಬಿದರು.
ಸಂತ್ರಸ್ತ ಕುಟುಂಬದೊಂದಿಗೆ ಪಕ್ಷವು ನಿಂತು ಕೊಂಡು ನ್ಯಾಯ ದೊರೆಕಿಸಿ ಕೊಡಲಾಗುವುದು ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಲಾಯಿತು.
ನಿಯೋಗದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ S N ಬಶೀರ್ ಹರೇಕಳ, ಜಿಲ್ಲಾ ಸಮಿತಿ ಸದಸ್ಯರು ಅಶ್ರಫ್ ತಲಪಾಡಿ, ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಅಕ್ಬರ್ ರಾಝ, ಮಂಗಳೂರು ಕ್ಷೇತ್ರ ಕಾರ್ಯದರ್ಶಿ ಅಶ್ರಫ್ ಮಂಚಿ, ಉಬೇದುಲ್ಲಾ ಅಮ್ಮೆಂಬಳ, ಗ್ರಾಮ ಪಂಚಾಯತಿಯ ಸದಸ್ಯ ಹನೀಫ್ ಬೋಳಿಯಾರ್, ಸ್ಥಳೀಯ ಮುಖಂಡರಾದ ಆರಿಫ್ ಬೋಳಿಯಾರ್, ರಹಿಮಾನ್ ಮಠ, ಶರೀಫ್ ಬೋಳಿಯಾರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.