ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ನಲ್ಲಿ ದಾಸ, ಅಭಿಮಾನಿಗಳ ಚಾಲೆಂಜಿಂಗ್ ಸ್ಟಾರ್ ಎಂದೆಲ್ಲಾ ಕರೆಯಲ್ಪಟ್ಟ ನಟ ದರ್ಶನ್ ಇದೀಗ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿ, ಪೊಲೀಸರ ಕಸ್ಟಡಿಯಲ್ಲಿದ್ದು, ನಿರಂತರ ವಿಚಾರಣೆಗೆ ಒಳಪಟ್ಟಿದ್ದಾರೆ. ಒಂದೆಡೆ ದರ್ಶನ್ ಬಂಧನ ಚಿತ್ರರಂಗದ ಗಣ್ಯರು ಸೇರಿದಂತೆ ರಾಜ್ಯದ ಜನತೆಗೂ ಭಾರೀ ಅಚ್ಚರಿ ತಂದರೆ, ಹತ್ಯೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿರುವ ದರ್ಶನ್ ಪರ ಬೆಂಬಲದ ಘೋಷಣೆಗಳನ್ನು ಕೂಗುತ್ತಿರುವ ಅಭಿಮಾನಿಗಳು ಮತ್ತೊಂದೆಡೆ. ಆರಂಭಿಕ ಹಂತದಲ್ಲೇ ಮುಚ್ಚಿಹೋಗಬೇಕಿದ್ದ ಈ ಪ್ರಕರಣದಲ್ಲಿ ದರ್ಶನ್ರನ್ನು ಬಯಲಿಗೆಳೆದು ತಂದ ಇಬ್ಬರು ದಕ್ಷ ಅಧಿಕಾರಿಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮೂಲತಃ ಚಿತ್ರದುರ್ಗದವರಾದ ಮೃತ ರೇಣುಕಾಸ್ವಾಮಿ, ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ವೊಂದನ್ನು ಕಳುಹಿಸಿದ್ದರು. ಈ ವಿಷಯಕ್ಕೆ ತನ್ನ ಆಪ್ತರೊಂದಿಗೆ ಸೇರಿ, ರೇಣುಕಾಸ್ವಾಮಿಗೆ ಮನಬಂದಂತೆ ಥಳಿಸಿದ್ದರು. ಚಿತ್ರಹಿಂಸೆ ನೀಡಿ ಹತ್ಯೆಗೈದ ಆರೋಪದಡಿ ಇತರೆ 13 ಆರೋಪಿಗಳೊಂದಿಗೆ ದರ್ಶನ್ ಗೆ ಟ್ರೀಟ್ ಮೆಂಟ್ ನೀಡಲಾಗುತ್ತಿದೆ.
ಸದ್ಯ ಎಲ್ಲ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ಭರದಿಂದ ಸಾಗುತ್ತಿದೆ. ಅಸಲಿಗೆ ರೇಣುಕಾಸ್ವಾಮಿ ಮಣ್ಣಲ್ಲಿ ಮಣ್ಣಾದಂತೆ ಈ ಪ್ರಕರಣ ಕೂಡ ಬೆಳಕಿಗೆ ಬರುವ ಮುನ್ನವೇ ಆರಂಭಿಕ ಹಂತದಲ್ಲೇ ಮಣ್ಣಾಗಿ ಹೋಗಬೇಕಿತ್ತು. ದೊಡ್ಡ ದೊಡ್ಡ ಆಮಿಷಗಳು, ಪ್ರಭಾವಿಗಳ ನೆರಳು ಸೋಕಿದರೂ ಸಹ ದರ್ಶನ್ರನ್ನು ಈ ಪ್ರಕರಣದಿಂದ ತಪ್ಪಿಸಿಕೊಳ್ಳದಂತೆ ಬೇಟೆಯಾಡಿದ್ದು, ಈ ರಿಯಲ್ ಹೀರೋ. ಇವರಿಲ್ಲದೇ ಹೋಗಿದ್ದರೆ, ಈ ಪ್ರಕರಣ ಗಾಳಿಯಲ್ಲಿ ತೇಲಿ ಹೋಗುತ್ತಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ.
ಆರಂಭಿಕ ಹಂತದಲ್ಲಿ ತಮ್ಮ ವ್ಯಾಪ್ತಿಗೆ ಸೇರಿದಾಗಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪ ಪೊಲೀಸ್ ಆಯುಕ್ತ (ಪಶ್ಚಿಮ ವಿಭಾಗ) ಎಸ್. ಗಿರೀಶ್, ಮುಚ್ಚಿಹೋಗಬೇಕಿದ್ದ ಕೇಸ್ ಅನ್ನು ಬಯಲಿಗೆಳೆದು, ಸತ್ಯಾಸತ್ಯತೆ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಜನಸಾಮಾನ್ಯರು ಮೆಚ್ಚುವಂತೆ ಶ್ರಮಿಸಿದ್ದಾರೆ. ಈ ಡೈನಾಮಿಕ್ ಅಧಿಕಾರಿಗಳು ಇಲ್ಲದೇ ಹೋಗಿದ್ದರೆ, ಪ್ರಕರಣದ ಸತ್ಯವು ಹೂತುಹೋಗುತ್ತಿತ್ತು ಎಂಬುದರಲ್ಲಿ ಸಂದೇಹವೇ ಇಲ್ಲ. ಈ ಬಗ್ಗೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, ‘ಕೊಲೆಯ ಆರೋಪದಲ್ಲಿ ರೀಲ್ ನಟನನ್ನು ಸೆರೆಹಿಡಿಯಲು ಧೈರ್ಯ ಬೇಕು. ಆ ಕೆಲಸವನ್ನು ಮಾಡುವಲ್ಲಿ ಡಿಸಿಪಿ ಗಿರೀಶ್ ಮತ್ತು ಸಹಾಯಕ ಪೊಲೀಸ್ ಕಮಿಷನರ್ (ವಿಜಯನಗರ) ಚಂದನ್ ಕುಮಾರ್ ರಿಯಲ್ ಹೀರೋ ಆಗಿ ಕಾಣಿಸುತ್ತಾರೆ’ ಎಂದು ಹೇಳಿದರು.
ಈ ಪ್ರಕರಣದಲ್ಲಿ ಡಿಸಿಪಿ ಗಿರೀಶ್ ಮತ್ತು ಎಸಿಪಿ ಚಂದನ್ ಕುಮಾರ್ ಅವರ ಧೈರ್ಯ, ಖಡಕ್ ನಿರ್ಧಾರಕ್ಕೆ ರಾಜ್ಯದ ಜನತೆಯಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ರೀಲ್ ಹೀರೋನ ಬೆವರಿಳಿಸಿದ ರಿಯಲ್ ಹೀರೋಗಳ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.