ಸಮಗ್ರ ನ್ಯೂಸ್: ಜೂ.24ರಿಂದ ಜು.3ರ ವರೆಗೆ ಸಂಸತ್ ಮೊದಲ ಅಧಿವೇಶನ ನಡೆಯಲಿದ್ದು, 18ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸಂಸದರ ಪ್ರಮಾಣ ಸ್ವೀಕಾರ ಹಾಗೂ ಮಹತ್ವದ ಸ್ಪೀಕರ್ ಆಯ್ಕೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರ ಸಚಿವ ಕಿರಣ್ ರಿಜಿಜು ಅವರು ಮಾಹಿತಿ ನೀಡಿದ್ದಾರೆ.
ಆರಂಭದ ಮೂರು ದಿನ ರಾಷ್ಟ್ರಪತಿ ನೇಮಿಸುವ ಹಂಗಾಮಿ ಸ್ಪೀಕರ್ ನೂತನ ಸಂಸದರಿಗೆ ಪ್ರಮಾಣ ಬೋಧಿಸಲಿದ್ದಾರೆ. ಬಳಿಕ ಸ್ಪೀಕರ್ ಆಯ್ಕೆ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜೂ. 27 ರಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದು, ಮುಂದಿನ ಐದು ವರ್ಷಗಳ ಹೊಸ ಸರ್ಕಾರದ ಮಾರ್ಗಸೂಚಿಯನ್ನು ರೂಪಿಸುವ ಸಾಧ್ಯತೆಯಿದೆ ಎಂದು ಹೇಳಿದರು.
ಕೇಂದ್ರ ಬಜೆಟ್ ಮಂಡನೆಗಾಗಿ ಸಂಸತ್ತಿನ ಎರಡೂ ಸದನಗಳು ಜುಲೈ ಮೂರನೇ ವಾರದಲ್ಲಿ ಮತ್ತೆ ಸೇರುವ ನಿರೀಕ್ಷೆಯಿದೆ. ಸತತ 6 ಬಜೆಟ್ ಮಂಡಿಸಿದ್ದ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಹಿಂದಿಕ್ಕುವ ಮೂಲಕ ನಿರ್ಮಲಾ ಸೀತಾರಾಮನ್ ಅವರು ಸತತ ಏಳು ಬಾರಿ ಕೇಂದ್ರ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.