ಸಮಗ್ರ ನ್ಯೂಸ್: 2024ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಕೇರಳದ ತ್ರಿಶ್ಶೂರ್ ನಲ್ಲಿ ನಟ ಸುರೇಶ್ ಗೋಪಿ ಗೆಲುವು ಸಾಧಿಸುವ ಮೂಲಕ ದೇವರ ನಾಡಿನಲ್ಲಿ ಭಾರತೀಯ ಜನತಾ ಪಕ್ಷ ಖಾತೆ ತೆರೆದಿತ್ತು. ಇದರೊಂದಿಗೆ ಸುರೇಶ್ ಗೋಪಿ ಭಾನುವಾರ ಮೋದಿ 3.0 ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.
ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿದ ಸುರೇಶ್ ಗೋಪಿ, ನಾನು ಸಂಸದನಾಗಿ ಕಾರ್ಯನಿರ್ವಹಿಸಲು ಬಯಸುತ್ತೇನೆ ವಿನಃ, ಸಚಿವ ಸ್ಥಾನಮಾನ ಬೇಡ ಎಂಬುದಾಗಿ ತಿಳಿಸಿದ್ದಾರೆ. ತಕ್ಷಣವೇ ನನ್ನ ರಾಜ್ಯ ಖಾತೆ ಸಚಿವ ಸ್ಥಾನಮಾನ ಹೊಣೆಗಾರಿಕೆಯಿಂದ ಬಿಡುಗಡೆಗೊಳಿಸುತ್ತಾರೆಂಬ ನಂಬಿಕೆ ಇರುವುದಾಗಿ ಸುರೇಶ್ ಗೋಪಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತ್ರಿಶ್ಶೂರ್ ಜನತೆಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ. ಸಂಸದನಾಗಿ ನಾನು ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂಬುದು ಜನತೆಗೆ ತಿಳಿದಿದೆ. ನನಗೆ ಸಿನಿಮಾದಲ್ಲಿ ನಟಿಸಬೇಕಾಗಿದೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅದರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಾಗಿದೆ. ಇನ್ನು ಈ ಬಗ್ಗೆ ಪಕ್ಷ ನಿರ್ಧರಿಸಲಿ ಎಂದು ತಿಳಿಸಿದ್ದಾರೆ. 2024ರ ಲೋಕಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸುರೇಶ್ ಗೋಪಿ, ಒಂದು ವೇಳೆ ನಾನು ಚುನಾವಣೆಯಲ್ಲಿ ಜಯ ಸಾಧಿಸಿದರೆ, ನಾನು ಕೇಂದ್ರ ಸಚಿವನಾಗುತ್ತೇನೆ. ಇದು ಮೋದಿ ಅವರ ಗ್ಯಾರಂಟಿಯಾಗಿದೆ ಎಂದು ಬಹಿರಂಗವಾಗಿ ಹೇಳಿದ್ದರು.
ಪ್ರಚಾರದಲ್ಲಿ ಸುರೇಶ್ ಗೋಪಿ “ತ್ರಿಶ್ಶೂರ್ ನ ಕೇಂದ್ರ ಸಚಿವ, ಇದು ಮೋದಿ ಗ್ಯಾರಂಟಿ” ಎಂಬ ಸ್ಲೋಗನ್ ಮೊಳಗಿಸಿದ್ದರು. ಇದೀಗ ಚುನಾವಣೆಯಲ್ಲಿ ಗೆದ್ದು, ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನಾನು ಸಿನಿಮಾ ಇಂಡಸ್ಟ್ರೀಯನ್ನು ಬಿಡಲಾರೆ, ನಟನೆ ನನ್ನ ಹವ್ಯಾಸವಾಗಿದೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಮಾತು ಕೊಟ್ಟಿದ್ದೇನೆ. ಹೀಗಾಗಿ ಸಚಿವ ಸ್ಥಾನ ಬೇಡ ಎಂದು ತಿಳಿಸಿದ್ದಾರೆ ಎಂದು ಜಾಲತಾಣಗಳಲ್ಲಿ ಸುದ್ದಿಯಾಗಿದೆ.
ಸುದ್ದಿ ವೈರಲ್ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಅವರು ಇದೀಗ ಆ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಸುದ್ದಿಗಳು ಸುಳ್ಳು ಎಂದಿದ್ದಾರೆ.
ತಾನು ರಾಜೀನಾಮೆ ನೀಡುತ್ತಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ‘ಕೆಲವು ಮಾಧ್ಯಮಗಳಲ್ಲಿ ನಾನು ರಾಜೀನಾಮೆ ನೀಡಲಿರುವುದಾಗಿ ವರದಿಯಾಗುತ್ತಿದೆ. ಇದು ಶುದ್ಧ ಸುಳ್ಳು. ಮೋದಿ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿರುವುದು ಮತ್ತು ಕೇರಳವನ್ನು ಪ್ರತಿನಿಧಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ. ಮೋದಿಜಿಯವರ ಮಾರ್ಗದರ್ಶನದಲ್ಲಿ ನಾವು ಕೇರಳದ ಅಭಿವೃದ್ಧಿಗಾಗಿ ದುಡಿಯಲು ನಾನು ಬದ್ಧನಾಗಿದ್ದೇನೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.