ಸಮಗ್ರ ನ್ಯೂಸ್: ನಮಗೆ ಫ್ರೀ ಬಸ್ ಬೇಡ, ಹೆಚ್ಚುವರಿ ಬಸ್ಸುಗಳನ್ನು ಹಳ್ಳಿಯಲ್ಲಿ ಓಡಿಸಿ ಸಹಾಯ ಮಾಡಿ ಎಂದು ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಸರಿಯಾದ ಸಮಯಕ್ಕೆ ಓಡುವ ಹೆಚ್ಚುವರಿ ಬಸ್ಸುಗಳನ್ನು ಕೊಡಿ. ನಾವು ಪಾಸ್ ಮಾಡಿಸುತ್ತೇವೆ. ಹಣಕೊಟ್ಟು ಪ್ರಯಾಣ ಮಾಡುತ್ತೇವೆ ಎಂದು ಏರು ಧ್ವನಿಯಲ್ಲಿ ಉಡುಪಿ ಜಿಲ್ಲೆಯ ಬೈಂದೂರಿನ ವಿದ್ಯಾರ್ಥಿನಿ ಕೆಎಸ್‌ಆರ್‌ಟಿಸಿ ಅಧಿಕಾರಿ ಮುಂದೆ ಸಮಸ್ಯೆ ತೋಡಿಕೊಂಡಿದ್ದಾಳೆ. ಎಬಿವಿಪಿ (ABVP) ನೇತೃತ್ವದಲ್ಲಿ ಕುಂದಾಪುರದಲ್ಲಿ ಪ್ರತಿಭಟನೆ ನಡೆದ ಸಂದರ್ಭ ತಮಗಾಗುವ ಬಸ್ ಸಮಸ್ಯೆಗಳ ವಿರುದ್ಧ ಸರ್ಕಾರದ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿದರು. ಉಚಿತ ಬಸ್ಸಿನಿಂದಾಗಿ ವಿದ್ಯಾರ್ಥಿಗಳು ಅಲೆದಾಡುವಂತಾಗಿದೆ. ಬೆಳಗ್ಗೆ, ಸಂಜೆ ಬಸ್ಸಿನಲ್ಲಿ ಸೀಟ್ ಸಿಗುವುದಿಲ್ಲ. ಸರಿಯಾದ ಸಮಯಕ್ಕೆ ಮನೆ ತಲುಪುವುದು ಕಷ್ಟವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಬಸ್ಸುಗಳನ್ನು ಓಡಿಸಿ ಸಹಾಯ ಮಾಡಿ ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ವಿದ್ಯಾರ್ಥಿನಿಯೊಬ್ಬಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ ಕೊಡಿ. ಅವರ ಸಮಸ್ಯೆಯನ್ನು ಕೇಳಿ, ಅದಕ್ಕೆ ಏನು ಪರಿಹಾರ ಕೊಡುತ್ತೀರಿ ಕೊಡಿ. ವಿದ್ಯಾರ್ಥಿಗಳಿಗೆ ಸಮಸ್ಯೆಯಾದರೆ ಅವರೊಂದಿಗೆ ಶಾಸಕನಾಗಿ ನಾನು ಕೂಡ ಮಕ್ಕಳೊಂದಿಗೆ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಎಚ್ಚರಿಸಿದರು.
ಒಂದು ವಾರದ ಒಳಗೆ ಸಮಸ್ಯೆ ಬಗೆಹರಿಸದೆ ಇದ್ದರೆ ರಸ್ತೆ ತಡೆ ಮಾಡಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳ ಮನವಿಗೆ ಗೌರವಿಸಿ ಮೇಲಧಿಕಾರಿಗಳಿಗೆ ತಾಲೂಕಿನ ಸಮಸ್ಯೆಯನ್ನು ತಲುಪಿಸಿ ಎಂದು ಸೂಚಿಸಿದರು.