ಸಮಗ್ರ ನ್ಯೂಸ್: ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಬಿಜೆಪಿ ನೇತೃತ್ವದ ಎನ್‌ಡಿಎಗೆ ತಮ್ಮ ಬೆಂಬಲವನ್ನು ಪುನರುಚ್ಛರಿಸಿದ್ದಾರೆ ಹಾಗೂ ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಲು ತಮ್ಮ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಇಂದು ಹೇಳಿದ್ದಾರೆ.
“ಮತದಾರರ ಬೆಂಬಲ ಖುಷಿ ನೀಡಿದೆ. ರಾಜಕಾರಣದಲ್ಲಿ ಏಳು ಬೀಳುಗಳು ಸಹಜ. ಇದೊಂದು ಐತಿಹಾಸಿಕ ಚುನಾವಣೆ. ಟಿಡಿಪಿ ಇಂದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪಕ್ಷ ಕಾರ್ಯಕರ್ತರ ಅಪಾರ ಶ್ರಮವಿದೆ. ಪ್ರಜಾಪ್ರಭುತ್ವ ರಕ್ಷಣೆಗಾಗಿ ಐದು ವರ್ಷ ಹೋರಾಡಿದೆವು. ಇಂದು ಯಶಸ್ವಿಯಾಗಿದ್ದೇವೆ,” ಎಂದು ಅವರು ಹೇಳಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಇಂದು ದೆಹಲಿಗೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನ 3 ರಿಂದ 4 ಗಂಟೆ ಸಮಯದಲ್ಲಿ ಸಭೆ ನಡೆಯಲಿದೆ.
ಆಂಧ್ರಪ್ರದೇಶದ 25 ರಲ್ಲಿ 21 ಸ್ಥಾನಗಳನ್ನು ಎನ್‌ಡಿಎ ಗೆದ್ದಿದೆ. ರಾಜ್ಯದಲ್ಲಿ ಟಿಡಿಪಿ 16 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಆದರೆ ಜನಸೇನೆ ಎರಡು, ಬಿಜೆಪಿ ಮೂರು ಮತ್ತು ವೈಎಸ್‌ಆರ್‌ಸಿಪಿ ಕೇವಲ 4 ಸ್ಥಾನಗಳನ್ನು ಪಡೆದುಕೊಂಡಿದೆ. ಈ ಅದ್ಭುತ ಗೆಲುವಿನೊಂದಿಗೆ ಟಿಡಿಪಿ ಎನ್‌ಡಿಎಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.