ಸಮಗ್ರ ನ್ಯೂಸ್: ಜೂನ್ 2 ರಿಂದ ಆರಂಭವಾಗಿರುವ ಈ ಬಾರಿಯ ಟಿ20 ವಿಶ್ವಕಪ್ ಹಲವು ವಿಶೇಷತೆಯಿಂದ ಕೂಡಿದ್ದು, ಈ ಬಾರಿ ಮೊದಲ ಬಾರಿಗೆ 20 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಇದರ ಜೊತೆಗೆ ಐಸಿಸಿ ಈ ಆವೃತ್ತಿಯ ದಾಖಲೆಯ ಮೊತ್ತದ ಬಹುಮಾನವನ್ನು ಪ್ರಕಟಿಸಿದೆ.
ಐಸಿಸಿ ಘೋಷಿಸಿರುವ ಪ್ರಕಾರ ಈ ಬಾರಿಯ ಟಿ20 ವಿಶ್ವಕಪ್ ಬಹುಮಾನದ ಗಾತ್ರ 11.25 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಅಂದರೆ ಭಾರತೀಯ ರೂಪಾರಿಯಲ್ಲಿ ಸುಮಾರು ರೂ 93.50 ಕೋಟಿ ರೂಗಳನ್ನು ಬಹುಮಾನದ ಮೊತ್ತವಾಗಿ ಇರಿಸಲಾಗಿದೆ. ಈ ಮೊತ್ತದಲ್ಲಿ ಚಾಂಪಿಯನ್ ತಂಡಕ್ಕೆ 2.45 ಮಿಲಿಯನ್ ಡಾಲರ್ (ಸುಮಾರು 20 ಕೋಟಿ ರೂ.) ಬಹುಮಾನ ಸಿಗಲಿದೆ.
ಇದರ ಜೊತೆಗೆ ರನ್ನರ್ ಅಪ್ ತಂಡಕ್ಕೆ ಅಂದರೆ ಫೈನಲ್‌ನಲ್ಲಿ ಸೋತ ತಂಡಕ್ಕೆ 1.28 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ 10.64 ಕೋಟಿ ರೂ. ಬಹುಮಾನ ಸಿಗಲಿದೆ.
ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ ತಲಾ 6.55 ಕೋಟಿ ರೂಗಳನ್ನು ಬಹುಮಾನವನ್ನಾಗಿ ನೀಡಲಾಗುತ್ತದೆ. ಸೂಪರ್ 8 ಹಂತದಲ್ಲಿ ಸೋತು ಲೀಗ್‌ನಿಂದ ಹೊರಬಿಳುವ ಪ್ರತಿಯೊಂದು ತಂಡಗಳಿಗೆ 3.18 ಕೋಟಿ ರೂಗಳ ಬಹುಮಾನ ಸಿಗಲಿದೆ.
ಪ್ರತಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆಯುವ ತಂಡಗಳಿಗೆ 2.06 ಕೋಟಿ ರೂ. ಬಹುಮಾನ ಸಿಕ್ಕರೆ, ಉಳಿದ ತಂಡಗಳು 1.87 ಕೋಟಿ ರೂಗಳನ್ನು ಬಹುಮಾನವನ್ನಾಗಿ ಪಡೆಯಲ್ಲಿವೆ. ಇದನ್ನು ಹೊರತುಪಡಿಸಿ ಸೂಪರ್ 8 ಹಂತದವರೆಗೆ ಪ್ರತಿ ಪಂದ್ಯವನ್ನು ಗೆಲ್ಲುವ ಪ್ರತಿಯೊಂದು ತಂಡಗಳಿಗೆ 25.9 ಲಕ್ಷ ರೂಗಳನ್ನು ಬಹುಮಾನವನ್ನಾಗಿ ನೀಡಲಾಗುತ್ತದೆ.
ಕಳೆದ ಆವೃತ್ತಿಯಲ್ಲಿ ಒಟ್ಟಾರೆ ಬಹುಮಾನದ ಗಾತ್ರ 5.6 ಮಿಲಿಯನ್ ಡಾಲರ್ ಆಗಿತ್ತು. ಕಳೆದ ಬಾರಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡಕ್ಕೆ ಸುಮಾರು 13 ಕೋಟಿ ರೂಗಳನ್ನು ಬಹುಮಾನವಾಗಿ ನೀಡಿದ್ದರೆ, ರನ್ನರ್ ಅಪ್ ಪಾಕಿಸ್ತಾನ ತಂಡಕ್ಕೆ 6.44 ಕೋಟಿ ರೂಗಳನ್ನು ಬಹುಮಾನವಾಗಿ ನೀಡಲಾಗಿತ್ತು.