ಸಮಗ್ರ ನ್ಯೂಸ್: ಎಐಸಿಸಿ ರಾಷ್ಟ್ರೀಯ ಕೋ ಆರ್ಡಿನೇಟರ್ ಆಗಿರುವ, ಕರ್ನಾಟಕ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಈಗ ಸೇನಾ ಅಧಿಕಾರಿಯಾಗಿದ್ದಾರೆ. ಪ್ರಾದೇಶಿಕ ಸೇನೆಯಲ್ಲಿ ಕಮಿಷನ್‌ಡ್ ಆಫೀಸರ್ ಆಗಿ ಭವ್ಯ ನರಸಿಂಹಮೂರ್ತಿ ಅವರು ನಿಯೋಜನೆಗೊಂಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಭವ್ಯ ನರಸಿಂಹಮೂರ್ತಿ, ಭಾರತೀಯ ಸೇನೆ ಸಮವಸ್ತ್ರದಲ್ಲಿ ತರಬೇತಿ ಪಡೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, ಇದು ನನ್ನ ಜೀವನದ ಹೆಮ್ಮೆಯ ಸಂದರ್ಭ ಎಂದು ಹೇಳಿದ್ದಾರೆ.
2022ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಎನ್ನುವ ಹೆಗ್ಗಳಿಕೆ ಕೂಡ ಭವ್ಯ ನರಸಿಂಹಮೂರ್ತಿ ಅವರದ್ದಾಗಿದೆ.
ಪ್ರಸ್ತುತ ಭವ್ಯ ನರಸಿಂಹಮೂರ್ತಿ ಅವರನ್ನು ಭಾರತ ಪಾಕಿಸ್ತಾನ ಗಡಿ (LOC) ಪ್ರದೇಶದಲ್ಲಿರುವ ಭಾರತೀಯ ಸೇನೆಯ ಘಟಕದಲ್ಲಿ ತರಬೇತಿ ಪಡೆದು ಲೆಫ್ಟಿನೆಂಟ್ ಆಗಿ ನಿಯೋಜನೆ ಮಾಡಲಾಗಿದೆ.
ಭಾರತೀಯ ನಾಗರಿಕರು ನಾಗರಿಕ ವೃತ್ತಿಯ ಜೊತೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಪ್ರಾದೇಶಿಕ ಸೇನೆ ಅವಕಾಶ ಮಾಡಿಕೊಡುತ್ತದೆ. ಭಾರತ ತಂಡದ ಮಾಜಿ ಆಟಗಾರ ಎಂಎಸ್ ಧೋನಿ, ರಾಜಸ್ಥಾನ ಮಾಜಿ ಸಿಎಂ ಸಚಿನ್ ಪೈಲಟ್ ಮತ್ತು ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಮಾದರಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.