ಸಮಗ್ರ ನ್ಯೂಸ್: ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಚುನಾವಣೋತ್ತರ ಸಮೀಕ್ಷೆಗಳನ್ನು ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳಾದ ಕಾಂಗ್ರೆಸ್, ಆಪ್ ಮತ್ತು ಸಮಾಜವಾದಿ ಪಕ್ಷಗಳು ಸ್ಪಷ್ಟವಾಗಿ ತಿರಸ್ಕರಿಸಿವೆ.
ಸಮೀಕ್ಷೆಗಳ ಕುರಿತು ಪ್ರತಿಕ್ರಿಯೆ ನೀಡಿದ ರಾಹುಲ್, ಈ ಸಮೀಕ್ಷೆಗಳೆಲ್ಲಾ ಬೋಗಸ್. ಇದು ಮೋದಿ ಮೀಡಿಯಾ ಪೆÇೀಲ್. ತಿರುಚಿದ ಚುನಾವಣೆ ಸಮರ್ಥನೆಗೆ ಮತ್ತು ಮಾನಸಿಕ ಯುದ್ಧ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಆಡುತ್ತಿರುವ ಆಟ. ನಿಮಗೆಲ್ಲಾ ಸಿಧು ಮೂಸೇವಾಲಾರ 295 ಹಾಡು ಗೊತ್ತಲ್ವಾ? ನಾವು ಕೂಡಾ ಈ ಬಾರಿ 295 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಹೊಸ ಸರ್ಕಾರದ ಮೊದಲ 100 ದಿನದ ಕಾರ್ಯಸೂಚಿ ಕುರಿತು ಪ್ರಧಾನಿ ಮೋದಿ ನಡೆಸುತ್ತಿರುವ ಸಭೆಗಳು, ಮರಳಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರುವ ತಂತ್ರವಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ಬೋಗಸ್ ಆಗಿದ್ದು, ಇದು ಜೂ.4ರ ಬಳಿಕ ಅಧಿಕಾರ ಕಳೆದುಕೊಳ್ಳುವುದು ಅನಿವಾರ್ಯ ಮತ್ತು ಖಚಿತವಾಗಿರುವ ವ್ಯಕ್ತಿಯೊಬ್ಬರ ಕೃತ್ಯ ಎಂದು ಆರೋಪಿಸಿದ್ದಾರೆ.
ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿ, ಬಿಜೆಪಿ ಪರ ಮಾಧ್ಯಮಗಳು ಎನ್‍ಡಿಎ ಮೈತ್ರಿಕೂಟದ ಗೆಲುವಿನ ಬಗ್ಗೆ ಭವಿಷ್ಯ ನುಡಿದಿವೆ. ಆದರೆ ಈ ಬಾರಿ ಇಂಡಿಯಾ ಮೈತ್ರಿಕೂಟ 300ಕ್ಕಿಂತ ಹೆಚ್ಚಿನ ಸ್ಥಾನ ಗೆದ್ದು ಅಧಿಕಾರಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಪ್ ನಾಯಕ ಅರವಿಂದ ಕೇಜ್ರಿವಾಲ್ ಕೂಡ, ಸಮೀಕ್ಷೆಗಳು ಸುಳ್ಳು. ಜೂ.4ಕ್ಕೆ ನಮಗೇ ಅಧಿಕಾರ ಎಂದಿದ್ದಾರೆ.