ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಮತದಾನ ಇಂದು(ಜೂನ್ 1) ಆರಂಭವಾಗಿದೆ. ಈ ಹಂತದಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಸೇರಿದ್ದಾರೆ.
ಏಳು ರಾಜ್ಯಗಳು ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಒಟ್ಟು 57 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಸೇರಿ 904 ಮಂದಿ ಕಣದಲ್ಲಿದ್ದಾರೆ.
ದೇಶದಾದ್ಯಂತ ಪ್ರಮುಖ ನಾಯಕರು ಬೃಹತ್ ರ್‍ಯಾಲಿಗಳನ್ನು ನಡೆಸುವ ಮೂಲಕ ಚುನಾವಣಾ ಪ್ರಚಾರವು ಗುರುವಾರ ಮುಕ್ತಾಯಗೊಂಡಿದೆ.
ಉತ್ತರ ಪ್ರದೇಶ ಮತ್ತು ಪಂಜಾಬ್‌ನ 13 ಸ್ಥಾನಗಳು, ಪಶ್ಚಿಮ ಬಂಗಾಳದ 9, ಬಿಹಾರದ 8, ಒಡಿಶಾದ 6, ಹಿಮಾಚಲ ಪ್ರದೇಶದ 4, ಜಾರ್ಖಂಡ್‌ನ 3 ಮತ್ತು ಚಂಡೀಗಢದ ಏಕೈಕ ಲೋಕಸಭಾ ಸ್ಥಾನಕ್ಕೆ ಇಂದು ಮತದಾನ ನಡೆಯುತ್ತಿದೆ.
ವಾರಣಾಸಿಯಿಂದ ಸ್ಪರ್ಧಿಸುತ್ತಿರುವ ಪ್ರಧಾನಿ ಮೋದಿಯ ಹೊರತಾಗಿ, ಹಿಮಾಚಲ ಪ್ರದೇಶದ ಹಮೀರ್‌ಪುರದಿಂದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಹಾರದ ಪಾಟ್ನಾ ಸಾಹಿಬ್‌ನಿಂದ ರವಿಶಂಕರ್ ಪ್ರಸಾದ್ ಮತ್ತು ಹಿಮಾಚಲ ಪ್ರದೇಶದ ಮಂಡಿಯಿಂದ ನಟಿ ಕಂಗನಾ ರನೌತ್ ಸೇರಿದಂತೆ ಇತರ ಪ್ರಮುಖ ಬಿಜೆಪಿ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಕಾಂಗ್ರೆಸ್‌ನ ಮನೀಶ್ ತಿವಾರಿ ಚಂಡೀಗಢದಿಂದ ಸ್ಪರ್ಧಿಸಿದ್ದರೆ, ವಿಕ್ರಮಾದಿತ್ಯ ಸಿಂಗ್ ಹಿಮಾಚಲ ಪ್ರದೇಶದ ಮಂಡಿಯಿಂದ ಮತ್ತು ಅಜಯ್ ರಾಯ್ ವಾರಣಾಸಿಯಿಂದ ಕಣದಲ್ಲಿದ್ದಾರೆ. ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಕೊಲ್ಕತ್ತಾದ ಡೈಮಂಡ್ ಹಾರ್ಬರ್‌ನಿಂದ ಸ್ಪರ್ಧಿಸುತ್ತಿದ್ದಾರೆ.
ಲೋಕಸಭೆ ಚುನಾವಣೆಯ 7 ಹಂತಗಳ ಮತದಾನ ಏಪ್ರಿಲ್ 19ರಂದು ಪ್ರಾರಂಭಗೊಂಡಿದ್ದು, ಇಂದು ಕೊನೆಗೊಳ್ಳಲಿದೆ. ಜೂನ್ 4ರಂದು ಫಲಿತಾಂಶ ಹೊರ ಬೀಳಲಿದೆ.