ಸಮಗ್ರ ನ್ಯೂಸ್: ಉತ್ತರ ಮತ್ತು ಪೂರ್ವದ ರಾಜ್ಯಗಳು ಕಂಗೆಡುವಂತೆ ಮಾಡಿರುವ ಸುಡುಬಿಸಿಲು ಇದೀಗ ಹೊಸ ದಾಖಲೆ ಸೃಷ್ಟಿಸಿದೆ. ದೆಹಲಿಯ ಮುಂಗೇಶ್‍ಪುರದಲ್ಲಿ 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಭಾರತದಲ್ಲಿ ದಾಖಲಾದ ಈವರೆಗಿನ ಅತಿ ಹೆಚ್ಚು ಉಷ್ಣಾಂಶ ಎನ್ನಿಸಿಕೊಂಡಿದೆ. ಆದರೆ ಇದು ಇದುವರೆಗೆ ದೇಶದಲ್ಲಿ ದಾಖಲಾದ ಸಾರ್ವಕಾಲಿಕ ದಾಖಲೆಯಾದ ಕಾರಣ, ಮಾಪನದ ಸೆನ್ಸರ್‍ಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅಧಿಕೃತವಾಗಿ ಮಾಹಿತಿ ನೀಡುವುದಾಗಿ ಹವಾಮಾನ ಇಲಾಖೆ ಹೇಳಿದೆ.
ಒಂದು ವೇಳೆ ಉಷ್ಣಾಂಶ 52.9 ಡಿಗ್ರಿ ದಾಖಲಾಗಿದ್ದರೆ, ಅದು ವಿಶ್ವದಾಖಲೆಗಿಂತ ಕೇವಲ 4 ಡಿಗ್ರಿ ಕಡಿಮೆ ಎನ್ನಿಸಿಕೊಳ್ಳಲಿದೆ. ಈ ಹಿಂದೆ ಅಮೆರಿಕ ಕ್ಯಾಲಿಫೆÇೀರ್ನಿಯಾದಲ್ಲಿರುವ ಡೆತ್‍ವ್ಯಾಲಿಯ ಗ್ರೀನ್‍ಲ್ಯಾಂಡ್ ನಲ್ಲಿ 56.7 ಡಿಗ್ರಿ ಸೆಲ್ಷಿಯಸ್ ದಾಖಲಾಗಿದ್ದೇ ಇದುವರೆಗಿನ ವಿಶ್ವದಾಖಲೆಯಾಗಿದೆ.
ರಾಜಸ್ಥಾನ, ಪಂಜಾಬ್, ಹರ್ಯಾಣ, ಬಿಹಾರ, ಜಾಖರ್ಂಡ್, ಒಡಿಶಾ ಮೊದಲಾದ ರಾಜ್ಯಗಳಲ್ಲೂ ಬುಧವಾರ ಗರಿಷ್ಠ ಉಷ್ಣಾಂಶ 44ರಿಂದ 49 ಡಿಗ್ರಿ ಸೆಲ್ಷಿಯಸ್‍ವರೆಗೆ ದಾಖಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ 52.9 ಡಿಗ್ರಿ ತಾಪಮಾನ ದಾಖಲಾಗಿದ್ದು ನಗರದ 3 ಕೋಟಿ ಜನರನ್ನು ಬೆಚ್ಚಿಬೀಳಿಸಿದೆ. ಇದು ಮಂಗಳವಾರವಷ್ಟೇ ದಾಖಲಾಗಿದ್ದ ನಗರದ 49.4 ಡಿಗ್ರಿ ಸೆಲ್ಸಿಯಸ್ ತಾಪಮಾನದ ದಾಖಲೆ ಮುರಿದಿದೆ. ಮಧ್ಯಾಹ್ನ 2.20ಕ್ಕೆ ಮಂಗೇಶ್‍ಪುರದಲ್ಲಿ 52.9 ಡಿಗ್ರಿ ತಾಪ ಇತ್ತು ಎಂದು ತಾಪಮಾನ ನಿಗಾ ಕೇಂದ್ರದಲ್ಲಿ ದಾಖಲಾಗಿದೆ.