ಸಮಗ್ರ ನ್ಯೂಸ್: ‘ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ (ಎಟಿಐ) ಅತಿಥಿ ಗೃಹದಲ್ಲಿ ನಾಪತ್ತೆಯಾದ ಸಾಮಗ್ರಿಗಳಿಗೆ ತಗಲುವ ಮೊತ್ತವನ್ನು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವೇತನದಲ್ಲೇ ಕಡಿತಗೊಳಿಸಬೇಕು’ ಎಂದು ಕೋರಿ ಸಂಸ್ಥೆಯ ಜಂಟಿ ನಿರ್ದೇಶಕರು (ಆಡಳಿತ) ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ರೋಹಿಣಿ ಇಲ್ಲಿನ ಜಿಲ್ಲಾಧಿಕಾರಿ ಯಾಗಿ ಬಂದ ವೇಳೆ ಅಂದರೆ 2020ರ ಅ.2ರಿಂದ 2020ರ ನ.14ರವರೆಗೆ ಎಟಿಐ ಅತಿಥಿಗೃಹದಲ್ಲಿ ವಾಸವಿದ್ದರು. ಬಳಿಕ ಜಿಲ್ಲಾಧಿಕಾರಿ ನಿವಾಸಕ್ಕೆ ಸ್ಥಳಾಂತರದ ವೇಳೆ ಅತಿಥಿಗೃಹದ 2 ಟೆಲಿಫೋನ್ ಟೇಬಲ್, 2 ಬಟ್ಟೆ ಹ್ಯಾಂಗರ್, 2 ಬೆತ್ತದ ಕುರ್ಚಿ, 2 ಟೆಲಿಫೋನ್ ಸ್ಟೂಲ್, 2 ಟೀಪಾಯಿ, ಒಂದು ಮೈಕ್ರೋವೇವ್ ಒವನ್, ಮಂಚ, ಹಾಸಿಗೆ, 2 ಪ್ಲಾಸ್ಟಿಕ್ ಕುರ್ಚಿ, 2 ಯೋಗಾ ಮ್ಯಾಟ್, 2 ಸ್ಟೀಲ್ ಜಗ್ ಕೊಂಡೊಯ್ದಿದ್ದಾರೆ ಎಂದು ಸಂಸ್ಥೆಯು ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆದಿತ್ತು. ಸಿಂಧೂರಿ ಅವರು ಇಲ್ಲಿಂದ ವರ್ಗವಾದ ಬಳಿಕ ಪತ್ರ ಬರೆಯಲಾಗಿತ್ತು.
‘ಅತಿಥಿ ಗೃಹದಲ್ಲಿನ 20 ವಸ್ತುಗಳನ್ನು ಜಿಲ್ಲಾಧಿಕಾರಿ ನಿವಾಸಕ್ಕೆ ಒಯ್ದಿದ್ದಾರೆ, ಅವುಗಳನ್ನು ಮರಳಿಸಬೇಕು’ ಎಂದು ಸಂಸ್ಥೆಯು ಜಿಲ್ಲಾಧಿಕಾರಿ ಕಚೇರಿಯನ್ನೂ ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿ ಕಚೇರಿಯು, ‘ಜಿಲ್ಲಾಧಿಕಾರಿ ವಸತಿ ಗೃಹದಲ್ಲಿ ಎಟಿಐನ ಯಾವುದೇ ಸಾಮಗ್ರಿಗಳು ಇಲ್ಲ’ ಎಂದು ಸ್ಪಷ್ಟಪಡಿಸಿತ್ತು.