ಸಮಗ್ರ ನ್ಯೂಸ್: ಬೆಂಗಳೂರಿನ ಯಲಹಂಕದ ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಎನ್‌ಎಸ್‌ಯುಐ ಕಾರ್ಯಕರ್ತರು ಮಸಿ ಬಳಿದಿರುವ ಘಟನೆ ನಡೆದಿದೆ. ಈ ಕೃತ್ಯ ಎಸಗಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮಸಿ ಬಳಿದಿರುವ ಎನ್‌ಎಸ್‌ಯುಐ ಕಾರ್ಯಕರ್ತರು, ಬಳಿಕ ಸೇತುವೆಗೆ ʼಭಗತ್ ಸಿಂಗ್ ಮೇಲ್ಸೇತುವೆʼ ಹೆಸರಿನ ಬ್ಯಾನರ್ ಹಾಕಿದ್ದಾರೆ. ನಾಮಫಲಕಕ್ಕೆ ಮಸಿ ಬಳಿದಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಕಾರ್ಯಕರ್ತರು ಹಾಗೂ ಸಾರ್ವಜನಿಕರ ನಡುವೆ ಕಿತ್ತಾಟ ನಡೆದಿದೆ. ಘಟನೆ ಬಳಿಕ ಯಲಹಂಕ ನ್ಯೂ ಟೌನ್ ಪೊಲೀಸರಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರವೀಣ್, ರಕ್ಷ ರಾಜ್, ನಿಶ್ಚಿತ್ ಗೌಡ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ವಿಶ್ವನಾಥ್, ಕಾಂಗ್ರೆಸ್ ನಾಯಕರ ಫೋಟೋಗಳು ಯಲಹಂಕದಲ್ಲಿವೆ. ಆದರೆ, ನಾವು ಯಾವುದೇ ಪೋಟೋಗಳಿಗೂ ಮಸಿ ಬಳಿದಿಲ್ಲ. ವೀರ ಸಾವರ್ಕರ್ ಇತಿಹಾಸವನ್ನು ಕಾಂಗ್ರೆಸ್‌ನವರು ತಿಳಿದುಕೊಳ್ಳಲಿ ಎಂದು ಕಿಡಿಕಾರಿದರು. ಶೀಘ್ರವಾಗಿ ತಪ್ಪಿತಸ್ಥರ ಬಂಧನ ಮಾಡಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ. ಸ್ವಯಂ ಪ್ರೇರಿತವಾಗಿ ಯಲಹಂಕ ಬಂದ್ ಕೂಡ ಮಾಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.