ಸಮಗ್ರ ನ್ಯೂಸ್: ಮೈಸೂರಿನಿಂದ ಮಡಿಕೇರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಂದ ನಿಗದಿತ ದರಕ್ಕಿಂತ 4ರು. ಹೆಚ್ಚು ಪಡೆದಿರುವುದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವಿಚಾರಣಾ ಆಯೋಗ ಮೈಸೂರು ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿಗೆ 8004 ರು. ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಯಾಣಿಕರೊಬ್ಬರಿಂದ 11 ಜನವರಿ2023 ರಂದು ಮೈಸೂರಿನಿಂದ ಮಡಿಕೇರಿಗೆ ತೆರಳುವ ವೇಳೆ ಸಾರಿಗೆ ಬಸ್ ನಿರ್ವಾಹಕ 140 ರು. ಪಡೆದಿದ್ದರು. ಮತ್ತೆ ಮಡಿಕೇರಿಯಿಂದ ಮೈಸೂರಿಗೆ ಪ್ರಯಾಣಿಸುವಾಗ ಮತ್ತೊಂದು ಬಸ್‍ನ ನಿರ್ವಾಹಕ 136 ರು. ಪಡೆದಿದ್ದರು.
ಇದರ ವಿರುದ್ಧ ಮಂಡ್ಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವಿಚಾರಣಾ ಆಯೋಗದಲ್ಲಿ 6 ಮೇ 2023 ರಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಆಯೋಗ ಮೈಸೂರಿನಿಂದ ಮಡಿಕೇರಿಗೆ ನಿಗದಿತ ದರಕ್ಕಿಂತ 4 ರು. ಹೆಚ್ಚುವರಿ ಹಣವನ್ನು ಪ್ರಯಾಣಿಕರಿಂದ ಪಡೆದಿದ್ದಕ್ಕೆ ಪರಿಹಾರವಾಗಿ 5000 ರು., ಇದರಿಂದ ಅರ್ಜಿದಾರರು ಮಾನಸಿಕ ಕಿರಿಕಿರಿ ಅನುಭವಿಸಿದ್ದಕ್ಕೆ 2000 ರು. ಮತ್ತು ಗ್ರಾಹಕರ ವಿಚಾರಣಾ ಆಯೋಗದ ಕಲ್ಯಾಣನಿಧಿಗೆ 1 ಸಾವಿರ ರು. ಸೇರಿ 8004 ರು.ಗಳನ್ನು 45 ದಿನಗಳೊಳಗೆ ಪಾವತಿಸುವಂತೆ ಮೈಸೂರು ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಅವರಿಗೆ ಗ್ರಾಹಕರ ವಿಚಾರಣಾ ಆಯೋಗದ ಅಧ್ಯಕ್ಷ ಎಸ್. ವಸಂತಕುಮಾರ್ ಆದೇಶಿಸಿದ್ದಾರೆ. ಅರ್ಜಿದಾರರ ಪರ ಎಂ.ಎನ್.ಮನೋಹರ ವಕಾಲವತ್ತು ವಹಿಸಿದ್ದರು