ಸಮಗ್ರ ನ್ಯೂಸ್: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದ್ದು, ಶುಕ್ರವಾರದಿಂದೀಚೆಗೆ ಭಾರಿ ಮಳೆಯಾಗುತ್ತಿದೆ. ಶನಿವಾರ ಬೆಳಗಿನ ಜಾವ ದಟ್ಟ ಮೋಡದೊಂದಿಗೆ ಮಳೆಯಾಗುತ್ತಿದ್ದು, ಕೆಲ ದಿನ ಇದೇ ರೀತಿ ಮಳೆ ಸುರಿಯುವ ಲಕ್ಷಣಗಳಿರುವುದಾಗಿ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿ ಜಿಲ್ಲೆಯ ಶಿರ್ವದಲ್ಲಿ ಭಾರಿ ಗಾಳಿ, ಮಳೆ ಸಂದರ್ಭ ಸಿಡಿಲಾಘಾತದಿಂದ ಕಾಲೇಜು ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ. ಶಿರ್ವ ಎಂಆರ್ ಎಸ್ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿ ಮಾಣಿಬೆಟ್ಟು ತೋಟದಮನೆ ನಿವಾಸಿ ರಮೇಶ್ ಪೂಜಾರಿ ಅವರ ಪುತ್ರ ರಕ್ಷಿತ್ (20) ಸಾವನ್ನಪ್ಪಿದ ದುರ್ದೈವಿ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೂರು ದಿನ ಯಲ್ಲೊ ಅಲರ್ಟ್ ಘೋಷಿಸಲಾಗಿದೆ. ಮೇ 25ರಿಂದ 27ರವರೆಗೆ ಕರಾವಳಿ ಭಾಗದಲ್ಲಿ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಪಡುಬಿದ್ರಿ ಪರಿಸರದಲ್ಲಿ ಉತ್ತಮ ಮಳೆಯಾಗಿದ್ದು, ಸುಮಾರು 42 ಸಾವಿರಕ್ಕೂ ಅಧಿಕ ಆಸ್ತಿ ನಷ್ಟ ಉಂಟಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. ಕುಂದಾಪುರದಲ್ಲಿ 11 ಮನೆಗಳಿಗೆ ಭಾಗಶಃ ಹಾನಿಯಾಗಿದ್ದರೆ, ಬ್ರಹ್ಮಾವರದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮುಕ್ಕದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅರಂತೋಡು ಎಂಬಲ್ಲಿ ಭಾರಿ ಗಾತ್ರದ ಮರ ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಮಂಜಿನ ವಾತಾವರಣ ನಿರ್ಮಾಣವಾಗಿದೆ.